ನಟಿ ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ: ಉದಯನಿಧಿ ಸ್ಟಾಲಿನ್ ಬಂಧನ, ಕೆಲವೇ ಗಂಟೆಗಳಲ್ಲಿ ಜಾಮೀನು
ಚೆನ್ನೈ: ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೆಲವೇ ಗಂಟೆಗಳಲ್ಲಿ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಡಿಎಂಕೆ ಆಯೋಜಿಸಿದ್ದ ರೈತರ ಪ್ರತಿಭಟನಾ ಸಭೆಯಲ್ಲಿ ಮಾತನಾಡುವ ವೇಳೆ ನಟಿ ತ್ರಿಷಾ ಕೃಷ್ಣನ್ ಕುರಿತು ದ್ವಂದ್ವಾರ್ಥ ಮೂಡಿಸುವ ರೀತಿಯ ಹೇಳಿಕೆ ನೀಡಿದ್ದರೆಂಬ ಆರೋಪ ಉದಯನಿಧಿ ವಿರುದ್ಧ ಕೇಳಿಬಂದಿದೆ. ಕಾರ್ಯಕ್ರಮದ ವೇಳೆ ಕೆಲವರು ತ್ರಿಷಾ ಹೆಸರನ್ನು ಕೂಗುತ್ತಿದ್ದಾಗ, “ನಾನು ಹೇಳಿದ್ದು ಕಾವೇರಿ ನೀರಿನ ಬಗ್ಗೆ” ಎಂದು ನಗುತ್ತಲೇ ಪ್ರತಿಕ್ರಿಯಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಾಗ ವೆಟ್ರಿ ಕಳಗಂ (TVK) ಪಕ್ಷ, ತಂಜಾವೂರು ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಸಾರ್ವಜನಿಕ ನಾಯಕರು ನೀಡುವುದು ಖಂಡನೀಯ ಎಂದು ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ದೂರು ದಾಖಲಾಗುತ್ತಿದ್ದಂತೆಯೇ ತಂಜಾವೂರು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದರು. ಬಂಧನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ, “ನಾನು ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನೂ ಹೇಳಿಲ್ಲ. ಹಾಗಿದ್ದರೂ ನನ್ನನ್ನು ಏಕೆ ಬಂಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸತ್ಯವನ್ನು ನ್ಯಾಯಾಲಯವೇ ನಿರ್ಧರಿಸಲಿ” ಎಂದು ಪ್ರತಿಕ್ರಿಯಿಸಿದರು.
ಅಶ್ಲೀಲ ಪದಗಳ ಬಳಕೆ, ಮಹಿಳೆಯ ಮಾನಹಾನಿ ಯತ್ನ, ದ್ವೇಷ ಪ್ರಚೋದನೆ, ಗಲಭೆಗೆ ಪ್ರೇರಣೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ನಿಬಂಧನೆಗಳನ್ನೂ ಪ್ರಕರಣಕ್ಕೆ ಅನ್ವಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಉದಯನಿಧಿ ಸ್ಟಾಲಿನ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ಹಾಗಾಗಿ ಬಂಧನವಾದ ಕೆಲವೇ ಗಂಟೆಗಳಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು.
ಇನ್ನೊಂದೆಡೆ, ಉದಯನಿಧಿ ಅವರ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿವೆ.