ಬಾಂಬ್ ಸ್ಫೋಟ ಹಿನ್ನೆಲೆ; ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸೇನೆ ಹೈ ಅಲರ್ಟ್
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ನುಷ್ಕಿ ಪ್ರದೇಶದಲ್ಲಿ ಭದ್ರತಾ ಪಡೆಗಳ ನೆಲೆಗಳ ಮೇಲೆ ಶುಕ್ರವಾರ ರಾಕೆಟ್ ಮತ್ತು ಗುಂಡಿನ ದಾಳಿ ನಡೆದ ನಂತರ ಸೇನೆ ನಿಗಾ ವಹಿಸಿದೆ. ಮಸ್ತುಂಗ್‌ನ ಸೇನಾ ಶಿಬಿರದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಒಂದು ದಿನದ ಬಳಿಕ ಈ ಘಟನೆ ಸಂಭವಿಸಿದೆ.
ನುಷ್ಕಿಯ ಫುಟ್‌ಬಾಲ್ ಕ್ರೀಡಾಂಗಣದ ಸಮೀಪದ ಸೇನಾ ನೆಲೆಗಳು ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಗುಂಡಿನ ಸದ್ದು ಮತ್ತು ಸ್ಫೋಟಗಳಿಂದ ಆತಂಕಗೊಂಡ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಮನೆಗಳಿಗೆ ತೆರಳಿದ್ದಾರೆ. ಚೆಕ್‌ಪೋಸ್ಟ್ ಸಮೀಪವೂ ಗುಂಡಿನ ದಾಳಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಕ್ವೆಟ್ಟಾದ ಸರಿಯಾಬ್ ಪ್ರದೇಶದ ನ್ಯೂ ಪೊಲೀಸ್ ಠಾಣೆ ಸಮೀಪವೂ ಸ್ಫೋಟ ಸಂಭವಿಸಿದೆ.