ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ: ಅಶೋಕ್
ಬೆಂಗಳೂರು: ಮೂರು ತಿಂಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಮಾಜಿ ಸಿಎಂ ಸದಾನಂದ ಗೌಡ ಹೇಳಿದ್ದಾರೆಂಬ ಆಡಿಯೋ ಬಿಜೆಪಿ ಪಾಳ್ಯದಲ್ಲಿ ತಳಮಳ ಸೃಷ್ಟಿಸಿದೆ. ಈ ಕುರಿತ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್, ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾವು ಏನೂ ಹೇಳಿಲ್ಲ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡರು ಹೇಳಿದ್ದಾರೆ. ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವಿಲ್ಲ. ಅದನ್ನು ವರಿಷ್ಠರು ಮಾತ್ರ ತೀರ್ಮಾನಿಸುತ್ತಾರೆ’ ಎಂದರು.
ಎಲ್ಲರ ಮನೆಯಲ್ಲಿ ದೋಸೆ ತೂತಾದರೆ ಕಾಂಗ್ರೆಸ್ನವರದ್ದು ಹೆಚ್ಚು ತೂತಾಗಿರುವುದರಿಂದ ಅವರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಕೆಂಪೇಗೌಡ ಜಯಂತಿ ವಿಚಾರದಲ್ಲಿ ಹೇಳಿಕೆ ನೀಡಿದ್ದಾರೆ. ಅದನ್ನು ಅಲ್ಲಿಗೆ ಮುಕ್ತಾಯ ಮಾಡಿದ್ದು, ಆ ರೀತಿ ಯಾರೂ ಮಾತಾಡಬಾರದು ಎಂದು ಸಂದೇಶ ನೀಡಲಾಗಿದೆ ಎಂದವರು ತಿಳಿಸಿದರು. ಅವರು ಪಕ್ಷ ಮುಖ್ಯ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದು, ಇದನ್ನು ಇಲ್ಲಿಗೇ ಅಂತ್ಯ ಮಾಡುತ್ತೇವೆ ಎಂದಿದ್ದಾರೆ ಎಂದರು.

ಜಿಬಿಎ ಚುನಾವಣೆಗೆ ಸಂಬಂಧಿಸಿದ ಉಸ್ತುವಾರಿಗಳ ಸಭೆ ನಡೆಸಿ, ಎಸ್ಐಆರ್, ಅಭ್ಯರ್ಥಿ ಆಯ್ಕೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಜಿಬಿಎ ಚುನಾವಣೆಯನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಐದು ಮಹಾ ನಗರಪಾಲಿಕೆಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಶೋಕ್ ತಿಳಿಸಿದರು.
ಮೂರು ವರ್ಷದಲ್ಲಿ ಬೆಂಗಳೂರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯ, ರಸ್ತೆಗುಂಡಿ, ತೆರಿಗೆ ಹೆಚ್ಚಳ ಮೊದಲಾದ ಸಮಸ್ಯೆಗಳನ್ನು ತೋರಿಸಲು ಸಮಿತಿ ರಚಿಸಲಾಗುತ್ತಿದೆ. ಪ್ರಣಾಳಿಕೆ ರೂಪಿಸಲು ಕೂಡ ಸಮಿತಿ ರಚಿಸಲಾಗುತ್ತಿದೆ ಎಂದು ಅಶೋಕ್ ಹೇಳಿದರು.