ಸ್ಥಳೀಯ ಟೆಲಿಕಾಂ ಸಂಶೋಧನೆಗೆ ಮತ್ತಷ್ಟು ಬಲ: IISc ಜೊತೆ C-DOT ಒಪ್ಪಂದ
ನವದೆಹಲಿ/ಬೆಂಗಳೂರು: ದೇಶೀಯ ದೂರಸಂಪರ್ಕ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ (C-DOT), ಭಾರತೀಯ ವಿಜ್ಞಾನ ಸಂಸ್ಥೆ (IISc) ಹಾಗೂ ವಿಜ್ಞಾನ ನಾವೀನ್ಯತೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (FSID) ನಡುವೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದದಡಿ ಬೆಂಗಳೂರಿನಲ್ಲಿ ಶ್ರೇಷ್ಠತಾ ಕೇಂದ್ರ (CoE) ಸ್ಥಾಪಿಸಲಾಗಿದ್ದು, 5G ಅಡ್ವಾನ್ಸ್ಡ್, 6G, ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ಕ್ವಾಂಟಮ್ ಸಂವಹನ ಹಾಗೂ ವೈರ್‌ಲೆಸ್ ತಂತ್ರಜ್ಞಾನಗಳ ಸಂಶೋಧನೆಗೆ ಉತ್ತೇಜನ ನೀಡಲಿದೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮ ವಲಯದ ಸಹಯೋಗದ ಮೂಲಕ ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿ, ನಾವೀನ್ಯತೆ ಹಾಗೂ ವಾಣಿಜ್ಯೀಕರಣಕ್ಕೆ ವೇಗ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
C-DOT ಪ್ರಕಾರ, ಈ ಸಹಯೋಗದಿಂದ ಸಂಶೋಧನೆ, ಬೌದ್ಧಿಕ ಆಸ್ತಿ ಸೃಷ್ಟಿ, ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ, ಜಂಟಿ ಕಾರ್ಯಾಗಾರಗಳು ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಉತ್ತೇಜನ ದೊರೆಯಲಿದೆ.

IISc ಜೊತೆಗಿನ ಈ ಕೇಂದ್ರವು C-DOT ಸ್ಥಾಪಿಸಿರುವ ಐದನೇ ಶ್ರೇಷ್ಠತಾ ಕೇಂದ್ರವಾಗಿದ್ದು, ಇದಕ್ಕೂ ಮೊದಲು ಐಐಟಿ ಹೈದರಾಬಾದ್, ಕಾನ್ಪುರ, ಗಾಂಧಿನಗರ ಮತ್ತು ರೂರ್ಕಿಯೊಂದಿಗೆ ಇದೇ ರೀತಿಯ ಸಹಭಾಗಿತ್ವ ಸ್ಥಾಪಿಸಲಾಗಿತ್ತು.
ಒಪ್ಪಂದಕ್ಕೆ C-DOT ಸಿಇಒ ಡಾ. ರಾಜ್‌ಕುಮಾರ್ ಉಪಾಧ್ಯಾಯ, FSID ಸಿಇಒ ಓಂಪ್ರಕಾಶ್ ಸುಬ್ಬರಾವ್ ಹಾಗೂ IISc ಅಧಿಕಾರಿಗಳ ಸಮ್ಮುಖದಲ್ಲಿ ಸಹಿ ಹಾಕಲಾಯಿತು. ಈ ಸಹಯೋಗವು ಸ್ವಾವಲಂಬಿ ಭಾರತದ ಗುರಿಗೆ ಬಲ ನೀಡುವುದರ ಜೊತೆಗೆ 6G ಮತ್ತು AI ಆಧಾರಿತ ಸಂವಹನ ತಂತ್ರಜ್ಞಾನಗಳಲ್ಲಿ ಭಾರತದ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲಿದೆ ಎಂದು ಡಾ. ಉಪಾಧ್ಯಾಯ ತಿಳಿಸಿದ್ದಾರೆ.