Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ವೈಭವ; ಆರ್ಥಿಕ, ಶೈಕ್ಷಣಿಕ ಅಸಮಾನತೆ ನಿವಾರಣೆಗೆ ಡಾ. ಮೋಹನ್ ಆಳ್ವ ಕರೆ

By ANU News
October 16, 2026 2 Min Read
0

ಚಿಕ್ಕಬಳ್ಳಾಪುರ: ಅಪಾರ ಯುವ ಸಂಪತ್ತನ್ನು ಹೊಂದಿರುವ ಭಾರತದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಯ ಕಂದಕವನ್ನು ನಿವಾರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದ್ದಾರೆ.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಸುಮಾರು 1,500 ವಿಶ್ವವಿದ್ಯಾಲಯಗಳು ಹಾಗೂ 50 ಸಾವಿರಕ್ಕೂ ಅಧಿಕ ಕಾಲೇಜುಗಳಿದ್ದು, 52 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಯುವಶಕ್ತಿ ಮತ್ತು ಶೈಕ್ಷಣಿಕ ವ್ಯವಸ್ಥೆ ಇದ್ದರೂ ಸಮಾಜದಲ್ಲಿನ ಅಸಮಾನತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದರು.

ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಯನ್ನು ತೊಡೆದುಹಾಕಲು ಸದ್ಗುರು ಶ್ರೀ ಮಧುಸೂದನ ಸಾಯಿ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಸಮಾಜದಲ್ಲಿನ ಸಮಸ್ಯೆಗಳನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ಇರಬಾರದು. ಸಾಮಾಜಿಕ ಅಂತರವನ್ನು ನಿವಾರಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಆರೋಗ್ಯ ಕ್ಷೇತ್ರ ವ್ಯಾಪಾರದ ಕೇಂದ್ರವಾಗುತ್ತಿರುವುದು ಕಳವಳಕಾರಿ ಸಂಗತಿ. ಚಿಕಿತ್ಸೆಯ ಹೆಸರಿನಲ್ಲಿ ಜನರಿಂದ ಅಪಾರ ಹಣ ವಸೂಲಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವುದು ಮಹತ್ವದ ಸಮಾಜಸೇವೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣದಲ್ಲಿ ಪರಾ ವಿದ್ಯೆಗೂ ಆದ್ಯತೆ ಅಗತ್ಯ: ಸದ್ಗುರು

ವಿದ್ಯಾದಾನ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ. ಧಾರ್ಮಿಕ ಸಂಸ್ಥೆಗಳು, ಮಠಗಳು ಹಾಗೂ ವಿವಿಧ ಸಂಘಟನೆಗಳೂ ಶಿಕ್ಷಣದ ವಿಸ್ತರಣೆಗೆ ಕೈಜೋಡಿಸಬೇಕು ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಶಿಕ್ಷಣ ಕೇವಲ ಲೌಕಿಕ ಜ್ಞಾನಕ್ಕೆ ಸೀಮಿತವಾಗಬಾರದು. ಭಾರತೀಯ ಮೌಲ್ಯಗಳು, ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪರಾ ವಿದ್ಯೆಗೂ ಆದ್ಯತೆ ನೀಡಬೇಕು ಎಂದರು.

ಹಿಂದಿನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಜೀವನ ಮೌಲ್ಯಗಳ ಬೋಧನೆಗೆ ಹೆಚ್ಚಿನ ಮಹತ್ವವಿತ್ತು. ತಮ್ಮ ಸಂಸ್ಥೆಯಲ್ಲಿಯೂ ಲೌಕಿಕ ಜ್ಞಾನ ನೀಡುವ ಅಪರಾ ವಿದ್ಯೆಯ ಜೊತೆಗೆ ಆಧ್ಯಾತ್ಮಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ಒಳಗೊಂಡ ಪರಾ ವಿದ್ಯೆಯನ್ನು ಬೋಧಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, ಪ್ರತಿಯೊಂದು ಸಾಂಸ್ಕೃತಿಕ ಕಲೆಯ ಹಿಂದೆಯೂ ಆಧ್ಯಾತ್ಮಿಕ ತತ್ವ ಅಡಗಿದೆ. ಭಾರತೀಯ ನೃತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿನ ಆಧ್ಯಾತ್ಮಿಕ ನೆಲೆಯನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.

ವಿವೇಚನೆ ಬೆಳೆಸಲು ಸರಸ್ವತಿಯ ಅನುಗ್ರಹ ಅಗತ್ಯ

ನವರಾತ್ರಿ ಉತ್ಸವದ ಅಂಗವಾಗಿ ಶೃಂಗೇರಿಯ ಋತ್ವಿಕರ ತಂಡದಿಂದ ಶುಕ್ರವಾರ ಮೇಧಾ ದಕ್ಷಿಣಾಮೂರ್ತಿ ಯಾಗ ಹಾಗೂ ಸರಸ್ವತಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಋತ್ವಿಜ ವಿದ್ವಾನ್ ವಿಕ್ರಮ್ ಭಟ್, ವಿವೇಚನಾಶಕ್ತಿಯನ್ನು ಕಳೆದುಕೊಂಡರೆ ಮಾನವ ಜನ್ಮದ ಸಾರ್ಥಕತೆ ಕುಂದುತ್ತದೆ. ಮನುಷ್ಯನಲ್ಲಿನ ಜಡತ್ವವನ್ನು ದೂರಮಾಡಿ, ವಿವೇಕವನ್ನು ಜಾಗೃತಗೊಳಿಸಲು ಸರಸ್ವತಿ ಮಾತೆಯ ಅನುಗ್ರಹ ಅಗತ್ಯ ಎಂದು ಹೇಳಿದರು.

ಚಿತ್ತಕೋಶದಲ್ಲಿ ವ್ಯಾಪಕವಾಗಿ ನೆಲೆಸಿರುವ ಕಾತ್ಯಾಯನಿ ಮಾತೆಯ ಆರಾಧನೆಯ ಮಹತ್ವವನ್ನು ವಿವರಿಸಿದ ಅವರು, ಜ್ಞಾನ ಮತ್ತು ಅನ್ವೇಷಣೆಯ ಹಾದಿಯಲ್ಲಿ ಶಕ್ತಿ ನೀಡುವ ಮೇಧಾ ದಕ್ಷಿಣಾಮೂರ್ತಿ ಯಾಗದ ಮಹತ್ವವನ್ನೂ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.

Author

ANU News

Follow Me
Other Articles
Previous

INDIA Alliance Plans Karnataka-wide Protest to ‘Save the Vote, Save the Nation’

Next

Muddenahalli Navaratri celebrations; Bridge Economic, Educational Inequalities, Dr. Mohan Alva Urges

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ಭಗವಂತ್ ಮಾನ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ
    • Amit Shah Targets Bhagwant Mann Government Over Punjab’s Law and Order
    • ದೇಶದಲ್ಲಿ ‘ಆಡಳಿತ ಬದಲಾವಣೆ’ ಪಿತೂರಿ ನಡೆಯುತ್ತಿದೆ: ರಾಜನಾಥ್ ಸಿಂಗ್ ಆರೋಪ
    • Rajnath Singh Alleges ‘Regime Change’ Conspiracy, Warns Against Attempts to Incite Unrest
    • Dr Sudha Yadav Sworn In as Karnataka’s 20th Governor
    Copyright 2026 — ANU News. All rights reserved. Blogsy WordPress Theme