Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕುಣಿಯಲಾಗದವನಿಗೆ ನೆಲ ಡೊಂಕು: ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ನೇರ ಸವಾಲು

By ANU News
November 1, 2026 2 Min Read
Comments Off on ಕುಣಿಯಲಾಗದವನಿಗೆ ನೆಲ ಡೊಂಕು: ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ನೇರ ಸವಾಲು

​ಮಂಡ್ಯ: “ಕುಣಿಯಲಾಗದವನಿಗೆ ನೆಲ ಡೊಂಕು ಎಂಬಂತೆ ಕುಮಾರಸ್ವಾಮಿ ಅವರ ಪಾಡಾಗಿದೆ. ಟೀಕೆ ಮಾಡುವುದನ್ನು ಬಿಟ್ಟು ಮೊದಲು ನಮ್ಮ ಜಿಲ್ಲೆಯ ನೆಲ-ಜನರ ಋಣ ತೀರಿಸುವ ಕೆಲಸ ಮಾಡಿ ತೋರಿಸಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸವಾಲೆಸೆದಿದ್ದಾರೆ.

​ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ 1,793 ಕೋಟಿ ರೂ.,ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಇಲ್ಲಿನ ಜನ ಎರಡೂವರೆ ಲಕ್ಷ ಮತಗಳ ಅಂತರದಿಂದ ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದ್ದಾರೆ. ಆದರೆ ನೀವು ಜಿಲ್ಲೆಗೆ ನೀಡಿದ ಕೊಡುಗೆಯೇನು? ಸಿಎಸ್‌ಆರ್ ನಿಧಿಯಲ್ಲಿ ಅಲ್ಲೊಂದು ಇಲ್ಲೊಂದು ಬಸ್ ನಿಲ್ದಾಣ ನಿರ್ಮಿಸಿದರೆ ಅದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರು ಕೇಳಿದಂತೆ (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ನಿರ್ಮಾಣ, ಮೂಲಸೌಕರ್ಯ ಉಪಕರಣ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ) ಕಾರ್ಖಾನೆ ನಿರ್ಮಾಣಕ್ಕೆ ಈಗಾಗಲೇ 100 ಎಕರೆ ಜಮೀನು ನೀಡಿದ್ದೇವೆ. ಅಗತ್ಯ ಬಿದ್ದರೆ ಇನ್ನೂ 500 ಎಕರೆ ಕೊಡಲು ಸಿದ್ಧರಿದ್ದೇವೆ. ಮೊದಲು ಕೆಲಸ ಮಾಡಿ ತೋರಿಸಿ, ನೋಡೋಣ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

​”ಸುಖಾಸುಮ್ಮನೆ ರಾಜ್ಯ ಸರ್ಕಾರದ ಮೇಲೆ ಟೀಕೆ ಮಾಡುವುದನ್ನು ಬಿಟ್ಟು ಮೊದಲು ಕೆಲಸ ಮಾಡಿ. ಕಾಂಗ್ರೆಸ್ ಪಕ್ಷವೇ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಅಧಿಕಾರ ನೀಡಿದೆ ಎಂಬುದನ್ನು ಮರೆಯಬೇಡಿ. ಸಮಯ ಯಾರಿಗಾಗಿಯೂ ಕಾಯುವುದಿಲ್ಲ, ಬೇಗ ಮುಗಿದುಹೋಗುತ್ತದೆ. ಕೊನೆಗೆ ‘ಜನರ ಋಣ ತೀರಿಸಲು ಸಾಧ್ಯವಾಗಲಿಲ್ಲವಲ್ಲ’ ಎಂದು ನಿಮ್ಮ ಮನಸ್ಸು ಕೊರಗುವ ದಿನ ಬರುತ್ತದೆ.

ನಿಮ್ಮ ಕೈಯಲ್ಲಿ ಕಾರ್ಖಾನೆ ನಿರ್ಮಿಸಲು ಆಗುವುದಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು, ಏಕೆಂದರೆ ನಾನು ನಿಮ್ಮ ಜತೆಯಲ್ಲೇ ಇದ್ದವನು. ಇದನ್ನು ಹೇಳಿದ್ದಕ್ಕೆ ನಿಮ್ಮ ಬೆಂಬಲಿಗರು ನಾಳೆಯೇ ಸುದ್ದಿಗೋಷ್ಠಿ ನಡೆಸಿ ನನ್ನ ವಿರುದ್ಧ ಮತ್ತಷ್ಟು ಟೀಕೆ ಮಾಡುತ್ತಾರೆಂಬುದೂ ನನಗೆ ತಿಳಿದಿದೆ” ಎಂದರು.

​”ಇಡೀ ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ನಮ್ಮ ಜಿಲ್ಲೆಯಲ್ಲಿದೆ. ಇಲ್ಲಿ ಡಿಸ್ಟಿಲರಿ ಘಟಕ ಪ್ರಾರಂಭಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ನಿಮಗೆ ನಿಜವಾಗಿಯೂ ಜಿಲ್ಲೆಯ ಜನರ ಋಣ ತೀರಿಸುವ ಕಾಳಜಿ ಇದ್ದರೆ, ಪ್ರಧಾನಿಯವರೊಂದಿಗೆ ಮಾತನಾಡಿ ಈ ಮೈಶುಗರ್ ಕಾರ್ಖಾನೆಗೆ 250 ಕೋಟಿ ರೂ., ಅನುದಾನ ತಂದುಕೊಡಿ. ನಾನೇ ಖುದ್ದಾಗಿ ನಿಮಗೆ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

​”ಯಾವುದೇ ಕೆಲಸ ಮಾಡದೆ ಕೇವಲ ಟಿವಿ ಪರದೆಗಳ ಮುಂದೆ ಕುಳಿತು ಮಾತನಾಡುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ‘ಜಿಲ್ಲೆಯಲ್ಲಿ 10,000 ಕೋಟಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಿದ್ದಾರಲ್ಲ, ಅದರ ಲೆಕ್ಕ ಕೊಡಿ’ ಎಂದು ನನ್ನ ವಿರುದ್ಧ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ನಾನು ಕುಮಾರಸ್ವಾಮಿ ಅವರಿಗಲ್ಲ, ಇಲ್ಲಿನ ಜನರಿಗೆ ಲೆಕ್ಕ ನೀಡುತ್ತೇನೆ” ಎಂದು ಸಚಿವರು ಸ್ಪಷ್ಟಪಡಿಸಿದರು.

​”ಡಿ.ಕೆ. ಶಿವಕುಮಾರ್ ಅವರು ಹೀಗೆಲ್ಲ ನಿದ್ದೆಗೆಟ್ಟು ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ನಾವು ಈ ಹಿಂದೆ ನೋಡಿದ ಡಿ.ಕೆ.ಶಿಯೇ ಬೇರೆ, ಮುಖ್ಯಮಂತ್ರಿಯಾದ ಬಳಿಕ ಈಗಿನ ಡಿ.ಕೆ.ಶಿಯೇ ಬೇರೆ. ಕಾರ್ಯಕರ್ತರನ್ನು ದೇವರಂತೆ, ಶಾಸಕರನ್ನು ಸ್ನೇಹಿತರಂತೆ ಕಂಡು, ಸಾರ್ವಜನಿಕರ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಿರುವ ಅವರಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ” ಎಂದು ಹಾರೈಸಿದರು.

​”ರಾಜ್ಯದಲ್ಲಿ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಏನೇ ಇದ್ದರೂ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ವಿರೋಧ ಪಕ್ಷಗಳು ಎಷ್ಟೇ ಟೀಕೆ-ಟಿಪ್ಪಣಿ ಮಾಡಿದರೂ ನಾವು ಯೋಜನೆಗಳನ್ನು ಅನುಷ್ಠಾನಗೊಳಿಸಿ ತೋರಿಸಿದ್ದೇವೆ. ಬರೀ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ರಚನಾತ್ಮಕ ಕೆಲಸಗಳನ್ನು ಮಾಡಿ ವಿರೋಧ ಪಕ್ಷಗಳು ಮಾತನಾಡಲಿ” ಎಂದು ತಿರುಗೇಟು ನೀಡಿದರು.

​”ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 3,000 ಕೋಟಿ ವಿಶೇಷ ಅನುದಾನ ನೀಡಿರುವ ಸರ್ಕಾರ, ಎಲ್ಲ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬೆಂಗಳೂರು ನಗರದ ಸರ್ವಾಂಗೀಣ ಪ್ರಗತಿಗೆ ಟೊಂಕ ಕಟ್ಟಿದೆ. ಸಾರ್ವಜನಿಕರ ಹಿತಕ್ಕಾಗಿ ಪ್ರಜಾಸೇವಾ ವಿಭಾಗವನ್ನೇ ತೆರೆಯಲಾಗಿದೆ. ನಮ್ಮ ದುಡಿಮೆಗೆ ಜನತೆ ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

​”ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಯದೆ, ರೈತರ ಹಿತದೃಷ್ಟಿಯಿಂದ ಬೆಳಗಾವಿಯಲ್ಲಿ ಸಭೆ ನಡೆಸಿ ಕಬ್ಬು ಬೆಳೆಗಾರರ ಸಂಕಷ್ಟ ಆಲಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸಹಕರಿಸಬೇಕು ಎಂಬ ಉದ್ದೇಶದಿಂದ ರೈತರ ಸಮಸ್ಯೆಗಳನ್ನು ಆಲಿಸಲು ಸಮಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ” ಎಂದು ತಿಳಿಸಿದರು.
​”ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಆದರೆ ಸಿದ್ದರಾಮಯ್ಯನವರು ತಮ್ಮ ಸ್ವಂತ ತಮ್ಮನಂತೆ ಡಿ.ಕೆ.ಶಿಯವರ ಬೆನ್ನಿಗೆ ನಿಂತು, ಅಧಿಕಾರ ಹಸ್ತಾಂತರ ನಡೆಸಿಕೊಟ್ಟರು. ಐದು ಗ್ಯಾರಂಟಿಗಳ ಜೊತೆಗೆ, ನೇಗಿಲ ಯೋಗಿ ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ನಂತಹ ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೆ ತರಲಾಗುತ್ತಿದೆ” ಎಂದರು.

​ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ನರೇಂದ್ರಸ್ವಾಮಿ, ರುದ್ರಪ್ಪ ಲಮಾಣಿ, ಶಾಸಕರಾದ ಪಿ. ರವಿಕುಮಾರ್, ಕೆ.ಎಂ. ಉದಯ್, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ರಾಜ್ಯೋತ್ಸವ: ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಸಿಎಂ ಪುಷ್ಪಾರ್ಚನೆ

Next

Bullet Train Corridor Extension to Guwahati a Major Boost for Northeast: Himanta Biswa Sarma

Recent Posts

  • South India Braces for Cyclone Murasu; Andhra, Tamil Nadu, Telangana Step Up Precautions
  • ಬಂಗಾಳಕೊಲ್ಲಿಯಲ್ಲಿ ‘ಮುರಸು’ ಚಂಡಮಾರುತ ತೀವ್ರತೆ ಹೆಚ್ಚಳ; ದಕ್ಷಿಣ ಭಾರತಕ್ಕೆ ಆತಂಕ
  • ಮಹಾದೇವ್ ಬೆಟ್ಟಿಂಗ್ ಜಾಲ: ಪ್ರಮುಖ ಆರೋಪಿ ಸೌರಭ್ ಚಂದ್ರಾಕರ್ ನನ್ನು ಒಮಾನ್‌ನಲ್ಲಿ ಬಂಧಿಸಿ ಕರೆತಂದ ಸಿಬಿಐ
  • CBI Extradites Mahadev Betting Syndicate Promoter Sourabh Chandrakar from Oman
  • US Could ‘Shut Down’ Iran at Any Moment, Says Trump
Copyright 2026 — ANU News. All rights reserved. Blogsy WordPress Theme