Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮಂಡ್ಯ ಜಿಲ್ಲೆಗೆ ₹1,793 ಕೋಟಿ ಅಭಿವೃದ್ಧಿ ಕೊಡುಗೆ: 57 ಕಾಮಗಾರಿಗಳಿಗೆ ಚಾಲನೆ

By ANU News
November 1, 2026 1 Min Read
Comments Off on ಮಂಡ್ಯ ಜಿಲ್ಲೆಗೆ ₹1,793 ಕೋಟಿ ಅಭಿವೃದ್ಧಿ ಕೊಡುಗೆ: 57 ಕಾಮಗಾರಿಗಳಿಗೆ ಚಾಲನೆ

ಮಂಡ್ಯ: 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಕ್ಟೋಬರ್ 31ರಂದು ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ₹1,793 ಕೋಟಿ ವೆಚ್ಚದ 57 ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕೆ.ಆರ್. ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ವ್ಯಾಪ್ತಿಯ ಕೆರೆ ತುಂಬಿಸುವ ಯೋಜನೆ, ರಸ್ತೆ ಮತ್ತು ಕಾಲುವೆಗಳ ದುರಸ್ತಿಗೆ ₹806 ಕೋಟಿ ಮೀಸಲಿಡಲಾಗಿದೆ. ಕಾವೇರಿ, ಕೆರಗೋಡು, ಶಿಂಷಾ, ಲೋಕಸರ ಹಾಗೂ ಮದ್ದೂರು ಶಾಖಾ ನಾಲೆಗಳ ಅಭಿವೃದ್ಧಿಗೆ ₹224 ಕೋಟಿ ಅನುದಾನ ನೀಡಲಾಗಿದೆ.

ಮಂಡ್ಯದ ಐತಿಹಾಸಿಕ ಮೈಷುಗರ್ ಕಾರ್ಖಾನೆಯ ಬಾಯಿಲಿಂಗ್ ಹೌಸ್ ಆಧುನೀಕರಣಕ್ಕೆ ₹60 ಕೋಟಿ ವೆಚ್ಚ ಮಾಡಲಾಗುತ್ತಿದೆ. ಹಂಪಾಪುರದಲ್ಲಿ 400 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ₹402.92 ಕೋಟಿ ಹಾಗೂ ನಾಗಮಂಗಲದ ಇರುಬ್ಬನಹಳ್ಳಿಯಲ್ಲಿ 66/11 ಕೆ.ವಿ. ಉಪಕೇಂದ್ರ ನಿರ್ಮಾಣಕ್ಕೆ ₹17.91 ಕೋಟಿ ಅನುದಾನ ಒದಗಿಸಲಾಗಿದೆ.

ಬಿ. ಹೊಸೂರು ಕಾಲೋನಿಯಲ್ಲಿ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ, ಮಹಾದೇವಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಔಷಧ ಉಗ್ರಾಣ ನಿರ್ಮಾಣಕ್ಕೆ ಒಟ್ಟು ₹34.23 ಕೋಟಿ ವೆಚ್ಚ ಮಾಡಲಾಗುತ್ತಿದೆ. ದುದ್ದ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಹಲಗೂರಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯವನ್ನು ಒಟ್ಟು ₹28.50 ಕೋಟಿ ವೆಚ್ಚದಲ್ಲಿ ಉದ್ಘಾಟಿಸಲಾಗಿದೆ.

ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಒಳಾಂಗಣ ಬ್ಯಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಾಣಕ್ಕೆ ₹3.50 ಕೋಟಿ ಹಾಗೂ ಶ್ರೀರಂಗಪಟ್ಟಣ ಕ್ರೀಡಾಂಗಣಕ್ಕೆ ₹1 ಕೋಟಿ ಮಂಜೂರು ಮಾಡಲಾಗಿದೆ.

ಮೈಸೂರು ದಸರಾ ಜಂಬೂಸವಾರಿಯಲ್ಲಿ ಪ್ರದರ್ಶಿಸಲಾದ ಜಿಲ್ಲಾ ಪಂಚಾಯಿತಿಯ ‘ಸ್ತ್ರೀ ಶಕ್ತಿ ಅನಾವರಣ’ ಸ್ತಬ್ಧಚಿತ್ರ ಪ್ರಥಮ ಬಹುಮಾನ ಪಡೆದಿದೆ. ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಯಶಸ್ವಿಯಾಗಿರುವ ಮಹಿಳೆಯರೇ ನಿರ್ವಹಿಸುವ ‘ಅಕ್ಕ ಕೆಫೆ’ಯನ್ನು ಜಿಲ್ಲೆಯ ಇತರ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದಲ್ಲದೆ, ಗ್ರಾಮೀಣ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಉಚಿತ ದಂತ ಚಿಕಿತ್ಸೆ ಒದಗಿಸುವ ‘ಮುಗುಳ್ನಗೆ ಸಿಂಚನ’ ಕಾರ್ಯಕ್ರಮವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ. ರವಿಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಆರ್. ನಂದಿನಿ, ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Milk Price Hike in Karnataka Inevitable to Protect Dairy Farmers: D K Shivakumar

Next

ಕತಾರ್‌ನಲ್ಲಿ 71ನೇ ಕನ್ನಡ ರಾಜ್ಯೋತ್ಸವ ‘ಕರುನಾಡ ವೈಭವ-2026’ ಸಂಭ್ರಮಕ್ಕೆ ಭರದ ಸಿದ್ಧತೆ

Recent Posts

  • South India Braces for Cyclone Murasu; Andhra, Tamil Nadu, Telangana Step Up Precautions
  • ಬಂಗಾಳಕೊಲ್ಲಿಯಲ್ಲಿ ‘ಮುರಸು’ ಚಂಡಮಾರುತ ತೀವ್ರತೆ ಹೆಚ್ಚಳ; ದಕ್ಷಿಣ ಭಾರತಕ್ಕೆ ಆತಂಕ
  • ಮಹಾದೇವ್ ಬೆಟ್ಟಿಂಗ್ ಜಾಲ: ಪ್ರಮುಖ ಆರೋಪಿ ಸೌರಭ್ ಚಂದ್ರಾಕರ್ ನನ್ನು ಒಮಾನ್‌ನಲ್ಲಿ ಬಂಧಿಸಿ ಕರೆತಂದ ಸಿಬಿಐ
  • CBI Extradites Mahadev Betting Syndicate Promoter Sourabh Chandrakar from Oman
  • US Could ‘Shut Down’ Iran at Any Moment, Says Trump
Copyright 2026 — ANU News. All rights reserved. Blogsy WordPress Theme