ಜೈವಿಕ ಇಂಧನ ಕ್ಷೇತ್ರದಲ್ಲಿ ಕರ್ನಾಟಕ–ಥೈಲ್ಯಾಂಡ್ ದ್ವಿಪಕ್ಷೀಯ ಸಹಕಾರಕ್ಕೆ ಪ್ರಸ್ತಾವನೆ: ಎಸ್. ಈ. ಸುಧೀಂದ್ರ
ಬೆಂಗಳೂರು: ಕರ್ನಾಟಕದ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿ, ಅಂತರರಾಷ್ಟ್ರೀಯ ತಂತ್ರಜ್ಞಾನ ವಿನಿಮಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಥೈಲ್ಯಾಂಡ್ ದೇಶದೊಂದಿಗೆ ದ್ವಿಪಕ್ಷೀಯ ಸಹಕಾರ ಸ್ಥಾಪಿಸಲು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಹತ್ವದ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಂಡಳಿ ಅಧ್ಯಕ್ಷ ಎಸ್. ಈ. ಸುಧೀಂದ್ರ ತಿಳಿಸಿದ್ದಾರೆ.
ಈ ಸಂಬಂಧ ಥೈಲ್ಯಾಂಡ್ ವಿದೇಶಾಂಗ ವ್ಯವಹಾರಗಳ ಸಚಿವರ ರಾಜಕೀಯ ವ್ಯವಹಾರಗಳ ಸಲಹೆಗಾರ ಜೂಕ್ರ್ ಬೂನ್ ಲಾಂಗ್, ಚೆನ್ನೈನ ಕಾನ್ಸುಲ್ ಜನರಲ್ ರಾಚಾ ಅರಿಬಾರ್ಗ್ ಮತ್ತು ಉಪ ಕಾನ್ಸುಲ್ ಜನರಲ್ ಪೊನ್‌ಪುನ್ ಪುಪಿಯಾಂಗ್‌ಜೈ ಅವರನ್ನೊಳಗೊಂಡ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆ ನಡೆಯಿತು. ಮುಖ್ಯಮಂತ್ರಿಗಳ ಪರವಾಗಿ ನಿಯೋಗವನ್ನು ಸ್ವಾಗತಿಸಿದ ಸುಧೀಂದ್ರ, ಜೈವಿಕ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದರು.
ಬಳಸಿದ ಅಡುಗೆ ಎಣ್ಣೆ ನಿರ್ವಹಣೆಗೆ ಒತ್ತು
ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಿಂದ ಬಳಸಿದ ಅಡುಗೆ ಎಣ್ಣೆಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಆಹಾರ ತಯಾರಿಕೆಗೆ ಮರುಬಳಕೆ ಮಾಡುವುದನ್ನು ತಡೆದು ಜೈವಿಕ ಇಂಧನ ಉತ್ಪಾದನೆಗೆ ಬಳಸುವ ವ್ಯವಸ್ಥೆ ಬಲಪಡಿಸುವ ಕುರಿತು ಚರ್ಚಿಸಲಾಯಿತು.
ಇದರೊಂದಿಗೆ ಸುಸ್ಥಿರ ವಿಮಾನಯಾನ ಇಂಧನ (SAF), ಹಸಿರು ಹೈಡ್ರೋಜನ್ ಮತ್ತು ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆ ಹಾಗೂ ತಂತ್ರಜ್ಞಾನ ವಿನಿಮಯಕ್ಕೂ ಉಭಯ ದೇಶಗಳು ಆಸಕ್ತಿ ವ್ಯಕ್ತಪಡಿಸಿದವು.

ಕೃಷಿ ಮತ್ತು ಸಾವಯವ ತ್ಯಾಜ್ಯದಿಂದ ಬಯೋಬ್ರಿಕೆಟ್ ಹಾಗೂ ಬಯೋಪೆಲೆಟ್‌ಗಳ ತಯಾರಿಕೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ, ಜಂಟಿ ಉದ್ಯಮಗಳ ಸ್ಥಾಪನೆ ಮತ್ತು ಜೈವಿಕ ಇಂಧನ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳ ಬಗ್ಗೆಯೂ ಸಮಾಲೋಚನೆ ನಡೆಯಿತು. ಇದರಿಂದ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.
ನೂತನ ಜೈವಿಕ ಇಂಧನ ನೀತಿ
ಸಭೆಯಲ್ಲಿ ಮಾತನಾಡಿದ ಸುಧೀಂದ್ರ, ರಾಜ್ಯದ ಸುಸ್ಥಿರ ಅಭಿವೃದ್ಧಿ ಯೋಜನೆಗಳಲ್ಲಿ ಜೈವಿಕ ಇಂಧನ ಕ್ಷೇತ್ರಕ್ಕೆ ಮಹತ್ವದ ಸ್ಥಾನವಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛ ಭಾರತ್ ಅಭಿಯಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯದ ನೂತನ ಜೈವಿಕ ಇಂಧನ ನೀತಿಯ ರಚನೆ ಪ್ರಗತಿಯಲ್ಲಿದೆ ಎಂದರು.
ಕರ್ನಾಟಕದ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಥೈಲ್ಯಾಂಡ್ ನಿಯೋಗದ ಸಲಹೆಗಾರ ಜೂಕ್ರ್ ಬೂನ್ ಲಾಂಗ್, ಮಂಡಳಿಯ ಕಾರ್ಯಯೋಜನೆಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಭೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ನಿಯೋಗಗಳ ವಿನಿಮಯದ ಮೂಲಕ ಸಹಕಾರ ಬಲಪಡಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಎಲ್. ಸೇರಿದಂತೆ ವಿವಿಧ ಅಧಿಕಾರಿಗಳು, ಯೋಜನಾ ಸಲಹೆಗಾರರು ಹಾಗೂ ಕಾನೂನು ಸಲಹೆಗಾರರು ಉಪಸ್ಥಿತರಿದ್ದರು.