ಕಾವೇರಿ ವಿವಾದ: 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ
ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ನವೆಂಬರ್ 7ರಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಯುವಂತೆ ತನ್ನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚಿಸಿದೆ. ಈ ನಿರ್ಧಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೂಡ ಅನುಮೋದಿಸಿದೆ ಎಂದು ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ನವೆಂಬರ್ 6ರಂದು ನಡೆದ CWRCಯ 146ನೇ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಮ್ಮ ವಾದಗಳನ್ನು ಮಂಡಿಸಿದ್ದವು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಿಗೆ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ 53.88ರಷ್ಟು ಒಳಹರಿವು ಕಡಿಮೆಯಾಗಿದೆ. ಅಲ್ಲದೆ, ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳು ಬರಪೀಡಿತವಾಗಿವೆ ಎಂದು ಕರ್ನಾಟಕ ತಿಳಿಸಿತ್ತು.
ಜೂನ್ 1ರಿಂದ ನವೆಂಬರ್ 6ರವರೆಗೆ ಬಿಳಿಗುಂಡ್ಲುವಿನಲ್ಲಿ 54.964 ಟಿಎಂಸಿ ನೀರು ಹರಿದುಬಂದಿದೆ. CWRC/CWMA ನಿರ್ದೇಶನದ ಅವಧಿಯಲ್ಲಿ 51.394 ಟಿಎಂಸಿ ನೀರು ಹರಿದಿದ್ದು, ನಿಗದಿತ ಪ್ರಮಾಣಕ್ಕಿಂತ 2.28 ಟಿಎಂಸಿ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು.

ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ನವೆಂಬರ್ 5ರಂದು ಒಟ್ಟು 37.125 ಟಿಎಂಸಿ ನೀರು ಸಂಗ್ರಹವಿತ್ತು. ಮಳೆ, ಲಭ್ಯ ನೀರು ಮತ್ತು ಅಂತರ್ಜಲ ಬಳಸಿ ಡಿಸೆಂಬರ್ 15ರವರೆಗೆ ಸಾಂಬಾ ಬೆಳೆಗಳ ನೀರಾವರಿ ಅಗತ್ಯ ಪೂರೈಸಬಹುದು ಎಂದು ಕರ್ನಾಟಕ ಪ್ರತಿಪಾದಿಸಿತ್ತು. ರಾಜ್ಯದ ಮುಂದಿನ ಆದ್ಯತೆಯ ಅಗತ್ಯಗಳಿಗೆ ಸುಮಾರು 50 ಟಿಎಂಸಿ ನೀರು ಬೇಕಾಗಿರುವುದರಿಂದ ಹೆಚ್ಚುವರಿ ನೀರು ಬಿಡುಗಡೆ ಸಾಧ್ಯವಿಲ್ಲ ಎಂದೂ ವಾದಿಸಿತ್ತು.
ಇದಕ್ಕೆ ಪ್ರತಿಯಾಗಿ, ನವೆಂಬರ್ 4ರವರೆಗೆ ತನ್ನ ಪಾಲಿನಲ್ಲಿ 16.895 ಟಿಎಂಸಿ ನೀರಿನ ಕೊರತೆಯಾಗಿದೆ ಎಂದು ತಮಿಳುನಾಡು ದೂರಿತ್ತು. ಬಾಕಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು.
ಎರಡೂ ರಾಜ್ಯಗಳ ವಾದ ಪರಿಶೀಲಿಸಿದ CWRC, ನವೆಂಬರ್ 7ರ ಬೆಳಿಗ್ಗೆ 8 ಗಂಟೆಯಿಂದ 15 ದಿನಗಳವರೆಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಈ ಅವಧಿಯಲ್ಲಿ ಸುಮಾರು 3.88 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿದೆ.
ರಾಜ್ಯದ ನೀರಿನ ಲಭ್ಯತೆ ಮತ್ತು ಆದ್ಯತೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ಹಿತಾಸಕ್ತಿ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.