ಒಮಾನ್ ಸಮುದ್ರದಲ್ಲಿ ಹಡಗಿಗೆ ಬೆಂಕಿ: 22 ಸಿಬ್ಬಂದಿಯ ರಕ್ಷಣೆ
ಒಮಾನ್: ಒಮಾನ್ ಸಮುದ್ರದಲ್ಲಿ ಸರಕು ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ 22 ಸಿಬ್ಬಂದಿಯನ್ನು ಯುಎಇ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿದೆ. ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ.
ಇದೇ ವೇಳೆ, ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಿಗೆ ನೌಕಾ ನೆಲಬಾಂಬ್ ತಗುಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇರಾನ್ ಆರೋಪಿಸಿದೆ. ಅನುಮತಿಯಿಲ್ಲದ ಮಾರ್ಗದಲ್ಲಿ ಸಾಗುತ್ತಿದ್ದ ಹಡಗುಗಳು ಜಿಪಿಎಸ್ ಮತ್ತು ನ್ಯಾವಿಗೇಷನ್ ವ್ಯವಸ್ಥೆ ಸ್ಥಗಿತಗೊಳಿಸಿದ್ದವು ಎಂದು ಐಆರ್ಜಿಸಿ ಹೇಳಿದೆ. ನಿಯಮ ಉಲ್ಲಂಘಿಸಿ ಪ್ರವೇಶಿಸುವ ಹಡಗುಗಳಿಗೆ ಎಚ್ಚರಿಕೆಯನ್ನೂ ನೀಡಿದೆ.

ಮತ್ತೊಂದೆಡೆ, ಒಮಾನ್ ಕೊಲ್ಲಿಯಲ್ಲಿ ನೌಕಾ ದಿಗ್ಬಂಧನ ಉಲ್ಲಂಘಿಸಲು ಯತ್ನಿಸಿದ ಆರೋಪದಡಿ ‘ಎಂ.ವಿ. ಹುದಾ’ ವಾಣಿಜ್ಯ ಹಡಗನ್ನು ಸೇನಾ ವಿಮಾನದ ಮೂಲಕ ನಿಷ್ಕ್ರಿಯಗೊಳಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಸೇಂಟ್ ಕಿಟ್ಸ್ ಧ್ವಜ ಹೊಂದಿದ್ದ ಈ ಹಡಗು ಇರಾನ್ ಬಂದರಿಗೆ ಭೇಟಿ ನೀಡಿ ವಾಪಸಾಗುತ್ತಿತ್ತು ಎಂದು ಹೇಳಿದೆ.