Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬರ, ಬೆಳೆಹಾನಿ; ₹60 ಸಾವಿರದವರೆಗೆ ಪರಿಹಾರಕ್ಕೆ ಅವಕಾಶ; ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

By ANU News
November 11, 2026 1 Min Read
Comments Off on ಬರ, ಬೆಳೆಹಾನಿ; ₹60 ಸಾವಿರದವರೆಗೆ ಪರಿಹಾರಕ್ಕೆ ಅವಕಾಶ; ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ಬೆಂಗಳೂರು: ಬರಪೀಡಿತ ಅರ್ಹ ರೈತರಿಗೆ ಕನಿಷ್ಠ ₹5,000 ಪರಿಹಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಮೊದಲ ಕಂತಿನಲ್ಲಿ ಕಡಿಮೆ ಮೊತ್ತ ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ಹಣ ಪಾವತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬರ ಪರಿಹಾರದ ಮೊದಲ ಕಂತಿನಲ್ಲಿ ಕೆಲ ರೈತರ ಖಾತೆಗೆ ₹2,500 ಬದಲಿಗೆ ₹2,000 ಜಮೆಯಾಗಿರುವ ಕುರಿತು ಆತಂಕ ವ್ಯಕ್ತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮೊದಲ ಕಂತಿನಲ್ಲಿ ಜಮೆಯಾಗಿರುವ ಮೊತ್ತವೇ ಅಂತಿಮ ಪರಿಹಾರವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2026ರ ಅಕ್ಟೋಬರ್ 23ರಂದು ಹೊರಡಿಸಿದ ಸರ್ಕಾರಿ ಆದೇಶದಂತೆ ಅರ್ಹ ರೈತರಿಗೆ ತಲಾ ₹2,500 ಮೊದಲ ಕಂತಿನ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿತ್ತು. ಅದರಂತೆ ನವೆಂಬರ್ 5ರಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ₹17.43 ಕೋಟಿ ಪರಿಹಾರ ವಿತರಣೆಗೆ ಚಾಲನೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ₹1,500, ನೀರಾವರಿ ಬೆಳೆಗಳಿಗೆ ₹2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹3,200 ಪರಿಹಾರ ನಿಗದಿಯಾಗಿದೆ. ಆದರೆ, ಈ ಮಾನದಂಡಗಳಿಗೆ ಸೀಮಿತವಾಗದೆ ಕೃಷಿ ಭೂಮಿಯ ವಿಸ್ತೀರ್ಣ ಎಷ್ಟೇ ಇದ್ದರೂ ಅರ್ಹ ರೈತರಿಗೆ ಕನಿಷ್ಠ ₹5,000 ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಮೊದಲ ಕಂತಿನಲ್ಲಿ ₹2,000 ಪಡೆದವರಿಗೆ ಮುಂದಿನ ಕಂತಿನಲ್ಲಿ ಬಾಕಿ ₹3,000 ಹಾಗೂ ₹2,500 ಪಡೆದವರಿಗೆ ಹೆಚ್ಚುವರಿ ₹2,500 ಪಾವತಿಸಲಾಗುವುದು. ಬೆಳೆಹಾನಿಯ ಪ್ರಮಾಣ, ಕೃಷಿ ಭೂಮಿಯ ವಿಸ್ತೀರ್ಣ ಮತ್ತು ಅನ್ವಯವಾಗುವ ಮಾನದಂಡಗಳ ಆಧಾರದ ಮೇಲೆ ಅರ್ಹ ರೈತರಿಗೆ ₹5,000ರಿಂದ ₹60,000ದವರೆಗೆ ಪರಿಹಾರ ಪಡೆಯಲು ಅವಕಾಶವಿದೆ ಎಂದು ಹೇಳಿದ್ದಾರೆ.

ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರ್ಹ ರೈತರಿಗೆ ಕಡಿಮೆ ಪರಿಹಾರ ದೊರೆತಿದ್ದರೆ ಅಥವಾ ಮುಂದಿನ ಕಂತು ಪಡೆಯುವಲ್ಲಿ ತೊಂದರೆಯಾದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ, ವಿರೋಧ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಪರಿಹಾರದ ಕುರಿತು ವದಂತಿ ಮತ್ತು ತಪ್ಪು ಮಾಹಿತಿಗಳಿಗೆ ಕಿವಿಗೊಡಬಾರದು ಎಂದು ರೈತರನ್ನು ಕೋರಿದ್ದಾರೆ.

ರೈತರ ಅಹವಾಲುಗಳನ್ನು ಸ್ವೀಕರಿಸಿ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಸಿದ್ಧವಿದೆ. ಅರ್ಹ ರೈತರಲ್ಲಿ ಯಾರೂ ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಡಾ. ಪರಮೇಶ್ವರ್ ತಿಳಿಸಿದ್ದಾರೆ.

Author

ANU News

Follow Me
Other Articles
Previous

ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ: ಪರಿಷ್ಕೃತ ದರ ಜಾರಿಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ

Next

ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ಗೆ €645 ಮಿಲಿಯನ್ ಮಿಲಿಟರಿ ನೆರವು ಘೋಷಿಸಿದ ಡೆನ್ಮಾರ್ಕ್

Recent Posts

  • Kerala Targets 100 Startups with Rs 100 Crore Annual Revenue
  • ಯುರೋಪ್‌ನಿಂದ ವಾಯು ರಕ್ಷಣಾ ಕ್ಷಿಪಣಿಗಳು, F-16 ಮದ್ದುಗುಂಡುಗಳಿಗೆ ಝೆಲೆನ್ಸ್ಕಿ ಮನವಿ
  • Zelenskyy Seeks Air Defence Missiles, F-16 Ammunition and Winter Aid from Europe
  • ನೇಪಾಳ, ಜಪಾನ್ ಜೊತೆ ವ್ಯಾಪಾರ-ಹೂಡಿಕೆ ಸಂಬಂಧ ವೃದ್ಧಿಗೆ ಆಂಧ್ರಪ್ರದೇಶ ಒತ್ತು
  • Andhra Pradesh Explores Trade, Investment Ties with Nepal and Japan at CII Summit
Copyright 2026 — ANU News. All rights reserved. Blogsy WordPress Theme