Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ: ಸ್ವತಂತ್ರ ತನಿಖೆಗೆ ಜೆಡಿಎಸ್ ಶಾಸಕರ ಆಗ್ರಹ, CSಗೆ ಮನವಿ

By ANU News
November 12, 2026 2 Min Read
Comments Off on ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ: ಸ್ವತಂತ್ರ ತನಿಖೆಗೆ ಜೆಡಿಎಸ್ ಶಾಸಕರ ಆಗ್ರಹ, CSಗೆ ಮನವಿ

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋಟ್ಯಂತರ ರೂಪಾಯಿ ಹಣಕಾಸಿನ ವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸುವಂತೆ ಜೆಡಿಎಸ್ ಶಾಸಕರ ನಿಯೋಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ. ಶರವಣ ಮತ್ತು ಶಾಸಕ ರಾಜುಗೌಡ ಪಾಟೀಲ್ ಅವರನ್ನೊಳಗೊಂಡ ನಿಯೋಗವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ವಿವರವಾದ ದೂರು ಸಲ್ಲಿಸಿತು.

ಸಾರ್ವಜನಿಕವಾಗಿ ಹರಿದಾಡುತ್ತಿರುವ ವಾಟ್ಸ್‌ಆ್ಯಪ್ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳಲ್ಲಿ ಜಿಲ್ಲಾಧಿಕಾರಿ (ಡಿಸಿ), ಉಪವಿಭಾಗಾಧಿಕಾರಿ (ಎಸಿ), ಅಪರ ಜಿಲ್ಲಾಧಿಕಾರಿ (ಎಡಿಸಿ), ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಸೇರಿದಂತೆ ವಿವಿಧ ಅಧಿಕಾರಿಗಳ ಹುದ್ದೆಗಳನ್ನು ಉಲ್ಲೇಖಿಸಿ ಕೋಟ್ಯಂತರ ರೂಪಾಯಿ ಹಣದ ಹಂಚಿಕೆ ಮತ್ತು ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿವೆ ಎಂದು ನಿಯೋಗ ದೂರಿದೆ.

ವಿಶೇಷವಾಗಿ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದಂತೆ ₹50 ಲಕ್ಷ, ₹60 ಲಕ್ಷ ಹಾಗೂ ₹75 ಲಕ್ಷದವರೆಗಿನ ಮೊತ್ತಗಳ ಉಲ್ಲೇಖಗಳಿದ್ದು, ಉಪವಿಭಾಗಾಧಿಕಾರಿಗಳಿಗೆ ಸಂಬಂಧಿಸಿದಂತೆ ₹13 ಲಕ್ಷ ಮತ್ತು ₹20 ಲಕ್ಷದ ಪ್ರಸ್ತಾಪಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಕಲೇಶಪುರದ ಮೂರು ಕ್ರಷರ್‌ಗಳ ಕಡತಗಳ ಅನುಮೋದನೆ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆದಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾತ್ರ, ಬ್ಯಾಂಕ್ ಖಾತೆಗಳು, ಯುಪಿಐ ವಹಿವಾಟುಗಳು ಹಾಗೂ ಇತರ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಬೇಕು. ವಾಟ್ಸ್‌ಆ್ಯಪ್ ಸಂಭಾಷಣೆಗಳ ನೈಜತೆಯನ್ನು ಮೂಲ ಮೊಬೈಲ್ ಸಾಧನಗಳು ಮತ್ತು ವಿಧಿವಿಜ್ಞಾನ ಪರೀಕ್ಷೆಯ ಮೂಲಕ ದೃಢಪಡಿಸಬೇಕು ಎಂದು ಮನವಿ ಮಾಡಲಾಗಿದೆ.

ಪ್ರಕರಣವನ್ನು ಜಿಲ್ಲಾಡಳಿತದ ಆಂತರಿಕ ತನಿಖೆಗೆ ಸೀಮಿತಗೊಳಿಸದೆ ಲೋಕಾಯುಕ್ತ ಅಥವಾ ಸಮರ್ಥ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು. ಆರೋಪಗಳಲ್ಲಿ ಸತ್ಯಾಂಶ ಕಂಡುಬಂದಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ತನಿಖೆಗೆ ಯಾವುದೇ ಅಡ್ಡಿಯಾಗದಂತೆ ಸಾಕ್ಷ್ಯಾಧಾರಗಳನ್ನು ಸಂರಕ್ಷಿಸಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಕರ್ತವ್ಯದಿಂದ ದೂರವಿಡುವ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ.

ಸರ್ಕಾರಿ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡು ಹಣ ವಸೂಲಿ ಮಾಡಿದ್ದಾರೆಯೇ ಎಂಬ ಆರೋಪಗಳು ಗಂಭೀರವಾಗಿವೆ. ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದು ನಿಷ್ಪಕ್ಷಪಾತ ತನಿಖೆಯಿಂದ ಹೊರಬರಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನರ ವಿಶ್ವಾಸವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ.

Author

ANU News

Follow Me
Other Articles
Previous

Karnataka Moves Supreme Court Over 56% Reservation Quota, Says Parameshwara

Next

JDS Seeks Independent Probe into Corruption Allegations at Hassan DC Office

Recent Posts

  • Karnataka Launches ‘Ruthu Taare’ Programme to Focus on Menopause Health
  • Kerala Targets 100 Startups with Rs 100 Crore Annual Revenue
  • ಯುರೋಪ್‌ನಿಂದ ವಾಯು ರಕ್ಷಣಾ ಕ್ಷಿಪಣಿಗಳು, F-16 ಮದ್ದುಗುಂಡುಗಳಿಗೆ ಝೆಲೆನ್ಸ್ಕಿ ಮನವಿ
  • Zelenskyy Seeks Air Defence Missiles, F-16 Ammunition and Winter Aid from Europe
  • ನೇಪಾಳ, ಜಪಾನ್ ಜೊತೆ ವ್ಯಾಪಾರ-ಹೂಡಿಕೆ ಸಂಬಂಧ ವೃದ್ಧಿಗೆ ಆಂಧ್ರಪ್ರದೇಶ ಒತ್ತು
Copyright 2026 — ANU News. All rights reserved. Blogsy WordPress Theme