E85 ಇಂಧನ ಬಿಡುಗಡೆ; ದೇಶಾದ್ಯಂತ ವಿಸ್ತರಣೆಗೆ ಕೇಂದ್ರದ ಯೋಜನೆ
ನವದೆಹಲಿ: ಶುದ್ಧ ಮತ್ತು ದೇಶೀಯ ಇಂಧನ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ನವದೆಹಲಿಯಲ್ಲಿ E85 ಇಂಧನವನ್ನು ಬಿಡುಗಡೆ ಮಾಡಿದರು.
E85 ಇಂಧನದಲ್ಲಿ 80-85% ಎಥೆನಾಲ್ ಹಾಗೂ 14-19% ಪೆಟ್ರೋಲ್ ಮಿಶ್ರಣವಿದ್ದು, ಇದನ್ನು ಆರಂಭಿಕ ಹಂತದಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳ 48 ಮಳಿಗೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಡಿಸೆಂಬರ್ 2026ರೊಳಗೆ 500 ಹಾಗೂ ಡಿಸೆಂಬರ್ 2027ರೊಳಗೆ ಸುಮಾರು 5,000 ಮಳಿಗೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.
ಈ ಇಂಧನವನ್ನು E20ರಿಂದ E100ವರೆಗೆ ಎಥೆನಾಲ್ ಮಿಶ್ರಣಗಳಲ್ಲಿ ಕಾರ್ಯನಿರ್ವಹಿಸಬಲ್ಲ ಫ್ಲೆಕ್ಸ್-ಇಂಧನ ವಾಹನಗಳಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.
E85 ಬೆಲೆ ಸಾಂಪ್ರದಾಯಿಕ ಪೆಟ್ರೋಲ್‌ಗಿಂತ ಲೀಟರ್‌ಗೆ ಸುಮಾರು ₹20 ಕಡಿಮೆಯಾಗಿದ್ದು, ಗ್ರಾಹಕರ ವೆಚ್ಚ ಇಳಿಕೆಗೆ ಸಹಕಾರಿಯಾಗಲಿದೆ ಎಂದು ಪುರಿ ಹೇಳಿದರು.

2014ರಲ್ಲಿ 1.53% ಇದ್ದ ದೇಶದ ಎಥೆನಾಲ್ ಮಿಶ್ರಣ ಪ್ರಮಾಣ ಈಗ 20%ಕ್ಕೆ ಏರಿದ್ದು, ಇದರಿಂದ ₹1.84 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರದ ಅಂದಾಜಿನ ಪ್ರಕಾರ, E85 ಬಳಕೆಯಿಂದ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಸುಮಾರು 61%ರವರೆಗೆ ಕಡಿಮೆಯಾಗಬಹುದು. ಜೊತೆಗೆ ಎಥೆನಾಲ್‌ಗೆ ಬೇಡಿಕೆ ಹೆಚ್ಚುವುದರಿಂದ ರೈತರ ಆದಾಯ ವೃದ್ಧಿಯಾಗಲಿದ್ದು, ಭಾರತದ ಇಂಧನ ಭದ್ರತೆಗೂ ಬಲ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.