ಹವಾಮಾನ ವೈಪರೀತ್ಯ ತಡೆಗೆ ಲಾವಂಚ ಬೆಳೆ ಪರಿಣಾಮಕಾರಿ: ಅಶೋಕ್ ದಳವಾಯಿ
ಬೆಂಗಳೂರು: ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಲಾವಂಚ (ವೆಟಿವರ್) ಬೆಳೆ ಪರಿಣಾಮಕಾರಿ ಅಸ್ತ್ರವಾಗಿದ್ದು, ಇದರ ಕೃಷಿಯಿಂದ ಮಣ್ಣಿನ ಸಾವಯವ ಅಂಶ ಹೆಚ್ಚುವುದರ ಜೊತೆಗೆ ರೈತರಿಗೆ ಆರ್ಥಿಕ ಲಾಭವೂ ದೊರೆಯಲಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಹೇಳಿದ್ದಾರೆ.
ನಗರದ ಕ್ವಿನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಭಾರತೀಯ ಲಾವಂಚ ಫೌಂಡೇಷನ್, ಜಲಾನಯ ಇಲಾಖೆ ಹಾಗೂ ಸೀಮ್ಯಾಪ್ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಲಾವಂಚ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಅನುಪಯುಕ್ತ ಭೂಮಿ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಲಾವಂಚ ಬೆಳೆ ಬೆಳೆಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಲಾವಂಚದ ಬೇರುಗಳು 2ರಿಂದ 4 ಮೀಟರ್ ಆಳಕ್ಕೆ ಬೆಳೆಯುವ ಮೂಲಕ ನೀರನ್ನು ನೆಲದಾಳಕ್ಕೆ ಇಳಿಸಿ, ಮಣ್ಣಿನ ತೇವಾಂಶ ಕಾಪಾಡುವುದಲ್ಲದೆ, ಮಣ್ಣಿನ ಸವಕಳಿಯನ್ನೂ ತಡೆಯುತ್ತವೆ ಎಂದರು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ್ ಮಾತನಾಡಿ, ಲಾವಂಚ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಬಹುಪಯೋಗಿ ಬೆಳೆ. ಇದರ ತೈಲಕ್ಕೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದು, ರೈತರಿಗೆ ಹೆಚ್ಚಿನ ಆದಾಯ ತಂದುಕೊಡಲಿದೆ ಎಂದು ಹೇಳಿದರು. ಮಣ್ಣಿನ ಸಾವಯವ ಇಂಗಾಲ ಹೆಚ್ಚಿಸುವ ಈ ಬೆಳೆಗೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ. ಎ.ಬಿ. ಪಾಟೀಲ್ ಮಾತನಾಡಿ, ಲಾವಂಚದ ಬೇರುಗಳಿಂದ ಸುಗಂಧ ತೈಲ, ಚಾಪೆ, ಟೋಪಿ, ಹಾರ, ಪೀಠೋಪಕರಣ ಸೇರಿದಂತೆ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ನೀರನ್ನು ಶುದ್ಧೀಕರಿಸುವ ಗುಣವೂ ಲಾವಂಚಕ್ಕೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೀಮ್ಯಾಪ್ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಯೋಗೇಂದ್ರ ಸೇರಿದಂತೆ ಹಲವು ಗಣ್ಯರಿಗೆ “ಕರ್ನಾಟಕ ಲಾವಂಚ ರಾಯಭಾರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.