ನವದೆಹಲಿ: ಸಾಂಪ್ರದಾಯಿಕ, ಪೂರಕ ಮತ್ತು ಸಮಗ್ರ ಔಷಧ (TCIM) ಕ್ಷೇತ್ರದಲ್ಲಿ ಸಂಶೋಧನೆ, ನಿಯಂತ್ರಣ ಹಾಗೂ ಪುರಾವೆ ಆಧಾರಿತ ಆರೋಗ್ಯ ಸೇವೆಯ ಕುರಿತು ಸಹಕಾರ ಹೆಚ್ಚಿಸಲು ಬ್ರಿಕ್ಸ್ ತಜ್ಞರ ಕಾರ್ಯಕಾರಿ ಗುಂಪು ರಚಿಸುವ ಪ್ರಸ್ತಾವಕ್ಕೆ 18ನೇ ಬ್ರಿಕ್ಸ್ ಶೃಂಗಸಭೆ ಬೆಂಬಲ ವ್ಯಕ್ತಪಡಿಸಿದೆ.
ನವದೆಹಲಿಯಲ್ಲಿ ಅಂಗೀಕರಿಸಲಾದ ಘೋಷಣೆಯಲ್ಲಿ ಆರೋಗ್ಯ ವ್ಯವಸ್ಥೆ ಬಲಪಡಿಸುವುದು ಹಾಗೂ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ (UHC) ಸಾಧಿಸುವಲ್ಲಿ ಸಾಂಪ್ರದಾಯಿಕ ಔಷಧದ ಸಾಧ್ಯತೆಯನ್ನು ಗುರುತಿಸಲಾಗಿದೆ.
ಬ್ರಿಕ್ಸ್ ಆರೋಗ್ಯ ಕಾರ್ಯವ್ಯಾಪ್ತಿಯಡಿ ಕಾರ್ಯನಿರ್ವಹಿಸಲಿರುವ ತಜ್ಞರ ಗುಂಪು ಸದಸ್ಯ ರಾಷ್ಟ್ರಗಳ ನಡುವೆ ಜ್ಞಾನ ವಿನಿಮಯ, ಸಂಶೋಧನಾ ಸಹಯೋಗ ಮತ್ತು ನಿಯಂತ್ರಣ ವ್ಯವಸ್ಥೆಗಳ ಕುರಿತು ಸಮನ್ವಯಕ್ಕೆ ವೇದಿಕೆಯಾಯಿತು.
ಚಿಕಿತ್ಸೆ ಹಾಗೂ ರೋಗನಿರೋಧಕ ಉದ್ದೇಶಗಳಿಗೆ ಬಳಸುವ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆ ಉತ್ಪನ್ನಗಳ ಕುರಿತು ಸಂಶೋಧನೆಯಲ್ಲಿ ಸಹಕಾರ ಹೆಚ್ಚಿಸಲು ಘೋಷಣೆ ಕರೆ ನೀಡಿದೆ. ಬ್ರಿಕ್ಸ್ ರಾಷ್ಟ್ರಗಳ ಸಾಂಪ್ರದಾಯಿಕ ಔಷಧ ಜ್ಞಾನವನ್ನು ಸುರಕ್ಷಿತ, ಪರಿಣಾಮಕಾರಿ ಹಾಗೂ ಕೈಗೆಟುಕುವ ಚಿಕಿತ್ಸಾ ಉತ್ಪನ್ನಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವನ್ನೂ ಒತ್ತಿಹೇಳಿದೆ.

ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್, ಈ ಉಪಕ್ರಮವು ಸದಸ್ಯ ರಾಷ್ಟ್ರಗಳಿಗೆ ಜ್ಞಾನ ಹಂಚಿಕೆ ಮತ್ತು ಸಂಶೋಧನೆ ಬಲಪಡಿಸುವ ಜತೆಗೆ ಪುರಾವೆ ಆಧಾರಿತ ವಿಧಾನಗಳನ್ನು ಉತ್ತೇಜಿಸಲು ನೆರವಾಗಲಿದೆ ಎಂದು ಪ್ರತಿಪಾದಿಸಿದರು.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯಡಿ ಜುಲೈ 21ರಂದು ಚಂಡೀಗಢದಲ್ಲಿ ನಡೆದ TCIM ಸಭೆಯಲ್ಲಿ ತಜ್ಞರ ಕಾರ್ಯಕಾರಿ ಗುಂಪಿನ ಉಲ್ಲೇಖ ನಿಯಮಗಳ ಕುರಿತು ಚರ್ಚೆ ನಡೆದಿತ್ತು. ಸರ್ಕಾರಿ ಅಧಿಕಾರಿಗಳು, ತಜ್ಞರು ಹಾಗೂ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ, ಸಂಶೋಧನಾ ಪಾಲುದಾರಿಕೆ, ಗುಣಮಟ್ಟದ ಭರವಸೆ ಹಾಗೂ ನಿಯಂತ್ರಣ ವ್ಯವಸ್ಥೆಗಳನ್ನು ಬಲಪಡಿಸಲು ಈ ಗುಂಪು ಕೇಂದ್ರೀಕೃತ ವೇದಿಕೆಯಾಗಬಹುದು ಎಂದು ತಿಳಿಸಿದ್ದಾರೆ.
TCIM ಉತ್ಪನ್ನಗಳು ಆಯಾ ರಾಷ್ಟ್ರಗಳ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾನದಂಡಗಳನ್ನು ಪೂರೈಸಬೇಕು ಎಂದು ಬ್ರಿಕ್ಸ್ ಘೋಷಣೆ ಸ್ಪಷ್ಟಪಡಿಸಿದೆ. ವೈಜ್ಞಾನಿಕ ಮೌಲ್ಯಮಾಪನ, ಔಷಧೀಯ ಮಾನದಂಡಗಳು ಹಾಗೂ ನಿಯಂತ್ರಕ ವಿಧಾನಗಳಲ್ಲೂ ಸಹಕಾರಕ್ಕೆ ಒತ್ತು ನೀಡಲಾಗಿದೆ.
ಈ ಬೆಳವಣಿಗೆ ಆಯುರ್ವೇದ ಸೇರಿದಂತೆ ಭಾರತದ ಆಯುಷ್ ವ್ಯವಸ್ಥೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಹಕಾರದ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.