ಇಂಧನ ದರ ಏರಿಕೆ ಹಿಂಪಡೆಯಿರಿ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದರ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣೆ ಬಳಿಕ ಇಂಧನ ದರ ಏರಿಕೆ ಆಗುತ್ತದೆ ಎಂದು ನಾವು ಮೊದಲೇ ಹೇಳಿದ್ದೆವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ” ಎಂದು ಆರೋಪಿಸಿದರು.
“ದರ ಏರಿಕೆಯ ಪರಿಣಾಮ ಸಾಮಾನ್ಯ ಜನರ ಜೀವನದ ಮೇಲೆ ಬೀಳಲಿದೆ. ರೈತರು, ಕಾರ್ಮಿಕರು ಹಾಗೂ ಬಡವರು ಹೆಚ್ಚು ಸಂಕಷ್ಟ ಅನುಭವಿಸಲಿದ್ದಾರೆ. ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಅಗತ್ಯ ವಸ್ತುಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುತ್ತದೆ” ಎಂದರು.

ಎಲ್ಪಿಜಿ ಸಿಲಿಂಡರ್ ದರ ಏರಿಕೆಯನ್ನೂ ಉಲ್ಲೇಖಿಸಿದ ಸಿದ್ದರಾಮಯ್ಯ, “ಬಿಜೆಪಿ ಅಧಿಕಾರಕ್ಕೆ ಬಂದಾಗ ಗ್ಯಾಸ್ ಸಿಲಿಂಡರ್ ದರ ಸುಮಾರು ₹413 ಇತ್ತು. ಈಗ ಅದು ₹1000 ದಾಟಿದೆ. ಇದರಿಂದ ಜನರ ಜೀವನ ಮತ್ತಷ್ಟು ಕಷ್ಟಕರವಾಗಿದೆ” ಎಂದು ಟೀಕಿಸಿದರು.
“ಈ ಸಂದರ್ಭದಲ್ಲಿ ಇಂಧನ ದರ ಹೆಚ್ಚಿಸಲು ಯಾವುದೇ ಸಮರ್ಥನೆ ಇಲ್ಲ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಇದೇ ವೇಳೆ, ನೀಟ್ ಪರೀಕ್ಷೆ ನಿರ್ವಹಣೆಯಲ್ಲೂ ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿದ ಅವರು, “ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬೇಕಾದ ಅನಿಶ್ಚಿತತೆ ಎದುರಿಸುತ್ತಿದ್ದಾರೆ” ಎಂದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ರಾಜ್ಯದಲ್ಲೂ ಶೀಘ್ರ ಆರಂಭವಾಗಲಿದ್ದು, ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.