Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮುದ್ದೇನಹಳ್ಳಿಯಲ್ಲಿ ‘ಸರ್ವರಿಗೂ ಸಮಬಾಳು, ಸಮಪಾಲು’ ಪರಿಕಲ್ಪನೆ ಸಾಕಾರ: ಎಚ್.ಡಿ. ಕುಮಾರಸ್ವಾಮಿ

By ANU News
October 16, 2026 2 Min Read
0

ಚಿಕ್ಕಬಳ್ಳಾಪುರ: ರಾಜಕಾರಣಿಗಳ ಭಾಷಣಗಳಿಗೆ ಸೀಮಿತವಾಗಿರುವ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಪರಿಕಲ್ಪನೆ ಮುದ್ದೇನಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ಸಾಕಾರಗೊಳ್ಳುತ್ತಿದೆ. ನಿಸ್ವಾರ್ಥ ಸೇವೆಯ ಮೂಲಕ ಶಿಕ್ಷಣ, ಪೌಷ್ಟಿಕತೆ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕ್ಕೆ ಶ್ರಮಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸರ್ಕಾರಗಳು ಮತ್ತು ರಾಜಕಾರಣಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರವನ್ನೂ ಒದಗಿಸಬೇಕು ಎಂಬುದು ತಮ್ಮ ಕನಸಾಗಿತ್ತು. ಆದರೆ, ದೀರ್ಘಾವಧಿಯವರೆಗೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಸಿಗದ ಕಾರಣ ಆ ಕನಸನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗಲಿಲ್ಲ. ಸದ್ಗುರು ಮಧುಸೂದನ ಸಾಯಿ ಅವರು ನಿಸ್ವಾರ್ಥ ಸೇವೆಯ ಮೂಲಕ ಅದನ್ನು ನನಸು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಒಂದು ಜಗತ್ತು, ಒಂದು ಕುಟುಂಬ’ ಎಂಬ ಧ್ಯೇಯದೊಂದಿಗೆ ಸದ್ಗುರುಗಳು ಜಗತ್ತಿನಾದ್ಯಂತ ಮಾನವೀಯ ಮೌಲ್ಯಗಳನ್ನು ಪಸರಿಸುತ್ತಿದ್ದಾರೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಆಶಯ ಮತ್ತು ಅನುಗ್ರಹದೊಂದಿಗೆ ಮಾನವೀಯ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಲಕ್ಷಾಂತರ ಕುಟುಂಬಗಳ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ನಡೆಯುತ್ತಿರುವ ಕಾರ್ಯ ಪವಾಡದಂತಿದೆ ಎಂದು ಬಣ್ಣಿಸಿದರು.

ಹಲವು ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಕಳವಳಕಾರಿಯಾಗಿರುವ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಒದಗಿಸುವ ಸದ್ಗುರುಗಳ ಪರಿಕಲ್ಪನೆ ಶ್ಲಾಘನೀಯ. ಜಗತ್ತಿನಲ್ಲಿ ಅಸೂಯೆ ಮತ್ತು ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ಕಾಣುವ ವಿಶಾಲ ದೃಷ್ಟಿಕೋನ ಅಪರೂಪದ್ದು ಎಂದರು.

ದೇಶಗಳ ನಡುವೆ ಅನಾರೋಗ್ಯಕರ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನರನ್ನು ಒಗ್ಗೂಡಿಸುವ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ನ ಕಾರ್ಯ ಮಾದರಿಯಾಗಿದೆ. ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತವೆ ಎಂದು ಹೇಳಿದರು.

‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, “ನಮ್ಮಿಂದ ಸಾಧ್ಯವಾಗದ ಕೆಲಸವನ್ನು ನಿಮ್ಮ ಸಂಸ್ಥೆ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಅವರ ಮಾತು ಅವರ ಔದಾರ್ಯವನ್ನು ತೋರಿಸುತ್ತದೆ. ಈ ಎಲ್ಲ ಸಾಧನೆಗಳ ಹಿಂದೆ ದೇವರ ಅನುಗ್ರಹವಿದೆ” ಎಂದರು.

ಸಮಾಜ, ಸರ್ಕಾರ ಮತ್ತು ಸೇವಾ ಸಂಸ್ಥೆಗಳು ಪರಸ್ಪರ ಕೈಜೋಡಿಸಿದಾಗ ದೇಶದಲ್ಲಿ ಅನೇಕ ಅದ್ಭುತಗಳನ್ನು ಸಾಧಿಸಬಹುದು. ಈ ಮೂರೂ ಶಕ್ತಿಗಳು ಒಗ್ಗೂಡಿದಾಗ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯರು ಒಂದೆಡೆ ಸೇರಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯರ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಕೀಳರಿಮೆ ಮೂಡಿಸುವಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಯಶಸ್ವಿಯಾಯಿತು. ಆದರೆ, ಭಾರತೀಯತೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಶಿಕ್ಷಣ ನೀಡಲು ತಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದರು.

ಆಧ್ಯಾತ್ಮಿಕ ಶಿಕ್ಷಣದ ಜತೆಗೆ ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಗೌರವ ಬೆಳೆಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಖ್ಯಾತ ಹಾರ್ಮೋನಿಯಂ ಕಲಾವಿದ ಡಾ. ರವೀಂದ್ರ ಕಟೋಟಿ ಅವರಿಂದ ಅಮೃತಮಾಲಾ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಮಾತನಾಡಿದರು.

Author

ANU News

Follow Me
Other Articles
Previous

Dhanush’s Political Entry? Fan Association’s Rebranding Sparks Speculation

Next

‘Equal Life, Equal Share for All’ Becoming Reality in Muddenahalli: H.D. Kumaraswamy

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • CM D.K. Shivakumar worships Lord Gokarnanatha and Goddess Sharada at Kudroli Dasara
    • President Murmu Inaugurates National SARAS Mela 2026 in Vijayawada
    • ಹಬ್ಬ ಸಂದರ್ಭದಲ್ಲಿ ರಾಜ್ಯಾದ್ಯಂತ 80 ಸಿಹಿತಿಂಡಿ ಘಟಕಗಳ ಪರಿಶೀಲನೆ; 125 ಮಾದರಿ ಸಂಗ್ರಹ
    • Karnataka Inspects 80 Sweet Units, Sends 125 Samples for Testing
    • Karnataka CM D.K. Shivakumar Participates in Mangaluru Dasara Celebrations
    Copyright 2026 — ANU News. All rights reserved. Blogsy WordPress Theme