Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಮಕ್ಕಳ ನಗುವೇ ಸಂಭ್ರಮದ ಭಾಷೆ..!’ ಬಾಲಮಂದಿರದ ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಪ್ರೀತಿಯ ಹಸ್ತಗಳು

By ANU News
October 10, 2026 2 Min Read
0

ಬೆಂಗಳೂರು: ಬಾಲಮಂದಿರದ ಆವರಣದಲ್ಲಿ ಅಂದು ಮಕ್ಕಳ ನಗುವೇ ಸಂಭ್ರಮದ ಭಾಷೆಯಾಗಿತ್ತು. ಕೆಲವರು ಬಿಲ್ಲುವಿದ್ಯೆಯಲ್ಲಿ ತಮ್ಮ ಗುರಿ ಪರೀಕ್ಷಿಸಿದರೆ, ಇನ್ನು ಕೆಲವರು ಸಮತೋಲನದ ಆಟಗಳಲ್ಲಿ ತೊಡಗಿದ್ದರು. ಹೊಸ ಆಟಗಳು, ರುಚಿಕರ ತಿನಿಸುಗಳು ಮತ್ತು ಆತ್ಮೀಯ ಒಡನಾಟದ ನಡುವೆ ಮಕ್ಕಳಿಗೆ ಅದೊಂದು ವಿಭಿನ್ನ ಅನುಭವದ ದಿನವಾಗಿತ್ತು.

ಸರ್ಕಾರಿ ಬಾಲಕರ ಬಾಲಮಂದಿರ, ಸರ್ಕಾರಿ ಬಾಲಕಿಯರ ಬಾಲಮಂದಿರ ಹಾಗೂ ಶಿಶುಮಂದಿರಗಳ ಮಕ್ಕಳಿಗಾಗಿ ಲಯನ್ಸ್ ಕ್ಲಬ್ ಮತ್ತು ಕರ್ಲೇನ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವು ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು, ಹೊಸ ಅನುಭವಗಳನ್ನು ಪರಿಚಯಿಸುವುದು ಹಾಗೂ ಅವರ ಬದುಕಿನಲ್ಲಿ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವುದು ಇದರ ಉದ್ದೇಶವಾಗಿತ್ತು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೀನಾ ಕಲ್ಲಮ್ಮನವರ್, ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ಎಚ್.ಕೆ., ಲಯನ್ಸ್ ಕ್ಲಬ್‌ನ ಅಂತರರಾಷ್ಟ್ರೀಯ ನಿರ್ದೇಶಕ ವಂಶಿ ದಾರ್ ಬಾಬು, ವಿಜಯ್ ಕುಮಾರ್, ಮಂಜುನಾಥ ಬಾಬು ಹಾಗೂ ಜಿಲ್ಲಾ ಅಧ್ಯಕ್ಷೆ ಶೋಭಾ ಮೊದಲಾದ ಪ್ರಮುಖರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

ಸಮತೋಲನದ ಆಟಗಳು, ಬಿಲ್ಲುವಿದ್ಯೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಸ್ವಯಂಸೇವಕರು ದೋಸೆ, ಪೂರಿ, ಬಿರಿಯಾನಿ, ಕಬಾಬ್, ಕಬ್ಬಿನ ಹಾಲು ಹಾಗೂ ಬರ್ಗರ್‌ಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ಪ್ರೀತಿಯಿಂದ ಬಡಿಸಿದರು. ಮಕ್ಕಳೊಂದಿಗೆ ಬೆರೆತು, ಅವರ ಮಾತುಗಳನ್ನು ಆಲಿಸಿ, ಅವರ ಸಂತಸದಲ್ಲಿ ಭಾಗಿಯಾದರು.

ದುಡಿಮೆಯಲ್ಲೇ ಬದುಕಿನ ಪಾಠ

ಕಾರ್ಯಕ್ರಮದಲ್ಲಿ ಮಕ್ಕಳ ಗಮನ ಸೆಳೆದದ್ದು 19 ವರ್ಷದ ಯುವತಿಯೊಬ್ಬಳ ಸಾಧನೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಲೇ ಸಂಜೆ ವೇಳೆ ‘ಡಿಸ್ಕೋ ಬರ್ಗರ್’ ಅಂಗಡಿ ನಡೆಸುವ ಈ ಯುವತಿ, ಸ್ವಂತ ಪರಿಶ್ರಮದಿಂದ ದುಡಿದು ಜೀವನ ನಿರ್ವಹಿಸುತ್ತಿದ್ದಾರೆ.

ಮಕ್ಕಳಿಗಾಗಿ ವಿವಿಧ ಬಗೆಯ ಬರ್ಗರ್‌ಗಳನ್ನು ಸ್ವತಃ ತಯಾರಿಸಿ ಬಡಿಸಿದ ಅವರು, ತಮ್ಮ ಕೆಲಸದ ಮೂಲಕವೇ ಒಂದು ಮಹತ್ವದ ಸಂದೇಶ ಸಾರಿದರು. ಓದು ಮತ್ತು ದುಡಿಮೆ ಪರಸ್ಪರ ವಿರುದ್ಧವಲ್ಲ; ಛಲ ಮತ್ತು ಪರಿಶ್ರಮವಿದ್ದರೆ ಶಿಕ್ಷಣದ ಜತೆಗೆ ಸ್ವಾವಲಂಬಿ ಬದುಕನ್ನೂ ಕಟ್ಟಿಕೊಳ್ಳಬಹುದು ಎಂಬುದನ್ನು ತಮ್ಮ ಸಾಧನೆಯಿಂದ ತೋರಿಸಿಕೊಟ್ಟರು. ಲಯನ್ಸ್ ಕ್ಲಬ್ ಈ ವಿಶೇಷ ಅವಕಾಶ ಕಲ್ಪಿಸಿತ್ತು.

ಪ್ರೀತಿ, ಪ್ರೋತ್ಸಾಹವೇ ಮಕ್ಕಳಿಗೆ ಆಸರೆ

ಬಾಲಮಂದಿರಗಳಲ್ಲಿ ಪೋಷಕರಿಲ್ಲದ, ಪರಿತ್ಯಕ್ತ ಹಾಗೂ ವಿವಿಧ ಸಂಕಷ್ಟಗಳಿಂದ ರಕ್ಷಿಸಲ್ಪಟ್ಟ ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ. ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ ಹಾಗೂ ಮಕ್ಕಳ ಕಳ್ಳಸಾಗಣೆಯಂತಹ ಸಂಕಷ್ಟಗಳಿಂದ ರಕ್ಷಿಸಲ್ಪಟ್ಟ ಮಕ್ಕಳಿಗೆ ಇಲ್ಲಿ ಆರೈಕೆ ಮತ್ತು ರಕ್ಷಣೆ ಒದಗಿಸಲಾಗುತ್ತದೆ.

ಇಂತಹ ಮಕ್ಕಳಿಗೆ ಸುರಕ್ಷಿತ ಆಶ್ರಯದ ಜತೆಗೆ ಪ್ರೀತಿ, ಪ್ರೋತ್ಸಾಹ ಮತ್ತು ಆತ್ಮೀಯತೆಯೂ ಅಗತ್ಯ. ಶಿಕ್ಷಣ, ಕಂಪ್ಯೂಟರ್ ತರಬೇತಿ, ಆಟೊಮೊಬೈಲ್ ತರಬೇತಿ ಹಾಗೂ ವಿವಿಧ ಕೌಶಲಾಭಿವೃದ್ಧಿ ಚಟುವಟಿಕೆಗಳ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.

ಮಕ್ಕಳಿಗೆ ಒಂದು ದಿನದ ಸಂತಸ ನೀಡುವುದಕ್ಕಿಂತಲೂ ಅವರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸುವುದು ಮುಖ್ಯ. ಸ್ವಯಂಸೇವಾ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಇಂತಹ ಪ್ರಯತ್ನಗಳಿಗೆ ಕೈಜೋಡಿಸಿದಾಗ, ಸಂಕಷ್ಟದ ನಡುವೆ ಬೆಳೆಯುತ್ತಿರುವ ಮಕ್ಕಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ಬಾಲಮಂದಿರದಲ್ಲಿ ಹಂಚಿಕೊಂಡ ನಗು, ಪ್ರೀತಿ ಮತ್ತು ಆತ್ಮೀಯತೆ ಅದಕ್ಕೆ ಒಂದು ಉದಾಹರಣೆಯಾಯಿತು.

Author

ANU News

Follow Me
Other Articles
Previous

US Hints at Further Military Action Against Iran

Next

Beyond shelter: Bengaluru initiative brings children joy, new experiences and hope

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • MLC Ravi Urges Karnataka CM to Implement Minimum Wages for Gram Panchayat Staff
    • ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಿ: ಸಿಎಂಗೆ ಡಾ. ರವಿ ಸಿ.ಟಿ. ಪತ್ರ
    • Andhra CM Resolves 50-Year Land Dispute, Benefits 1,301 Farmers
    • ಕೇಂದ್ರ ಸಚಿವ ಕಿರೆನ್ ರಿಜಿಜು ಭೇಟಿ ಮಾಡಿದ ಖಾದರ್; ಮಂಗಳೂರು ಹಜ್ ನಿರ್ಗಮನ ಕೇಂದ್ರ ಪುನರಾರಂಭಕ್ಕೆ ಮನವಿ
    • Khader Raises Karnataka Haj Pilgrims’ Concerns with Kiren Rijiju
    Copyright 2026 — ANU News. All rights reserved. Blogsy WordPress Theme