ಬೆಂಗಳೂರಿನಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ; ಎಲ್ಲೇ ಹೋದರೂ ನಮ್ಮ ಭಾಷೆ- ಸಂಸ್ಕೃತಿಯನ್ನು ಮರೆಯಬಾರದು ಎಂದ ಶೈನ್ ಶೆಟ್ಟಿ
ಬೆಂಗಳೂರು: “ನಾವು ಹುಟ್ಟಿದ ನಾಡು ಮತ್ತು ನಮ್ಮ ಭಾಷೆಯನ್ನು ಎಂದಿಗೂ ಮರೆಯಬಾರದು. ಹೊರರಾಜ್ಯ ಅಥವಾ ವಿದೇಶಕ್ಕೆ ಹೋದರೂ ನಮ್ಮ ನಾಡಿನ ಹೆಗ್ಗಳಿಕೆಯನ್ನು ಪರಿಚಯಿಸಬೇಕು. ನಮ್ಮತನವನ್ನು ಬಿಟ್ಟುಕೊಡಬಾರದು” ಎಂದು ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಹೇಳಿದರು.
ರಾಜಾಜಿನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾಂಗಣದಲ್ಲಿ ಕರಾವಳಿ ಹಿತರಕ್ಷಣಾ ಸಮಿತಿ ಮತ್ತು ಬ್ರಹ್ಮಲಿಂಗೇಶ್ವರ ಗೆಳೆಯರ ಬಳಗದ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನ ಹಾಗೂ ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮೆಕ್ಕೆಕಟ್ಟು ನಂದಿ ತಂಡದ ಕಲಾವಿದರು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಯಕ್ಷಕವಿ ಪಿ.ವಿ. ಆನಂದ ಸಾಲಿಗ್ರಾಮ ವಿರಚಿತ ‘ಮೆಕ್ಕೆಕಟ್ಟು ನಂದಿ’ ಯಕ್ಷಗಾನ ಪ್ರದರ್ಶಿಸಿದರು.

ಕಾರ್ಯಕ್ರಮಕ್ಕೆ ನಟ ಶೈನ್ ಶೆಟ್ಟಿ, ಅಭಯ ಸೇವಾ ಫೌಂಡೇಷನ್ ಅಧ್ಯಕ್ಷ ಎಂ.ಬಿ. ಉಮೇಶ್ ಶೆಟ್ಟಿ, ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ಅಧ್ಯಕ್ಷ ಡಿ.ಬಿ. ಪ್ರತಾಪ್ ಶೆಟ್ಟಿ, ಬ್ರಹ್ಮಲಿಂಗೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್ ಮಾರಣಕಟ್ಟೆ ಸೇರಿದಂತೆ ಗಣ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಗೋಪಾಲ್ ಗಾಣಿಗ ದಂಪತಿಯನ್ನು ಸನ್ಮಾನಿಸಲಾಯಿತು.
“ನಮ್ಮ ನಾಡಿನ ಇತಿಹಾಸ, ಪುರಾಣ ಪ್ರಸಂಗಗಳನ್ನು ಸಾರುವ ಯಕ್ಷಗಾನದಂತಹ ಅಪೂರ್ವ ಕಲೆಗಳನ್ನು ಕಲಾವಿದರು ಉಳಿಸಿ ಬೆಳೆಸಬೇಕು. ನಾನು ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವನು. ನನ್ನ ಚಿತ್ರ ಸ್ಟುಡಿಯೊಗೆ ‘ರಂಗಸ್ಥಳ’ ಎಂದು ಹೆಸರಿಟ್ಟಿದ್ದೇನೆ. ಕನ್ನಡ ಚಲನಚಿತ್ರಗಳಿಗೆ ಎಲ್ಲರೂ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು” ಎಂದು ಶೈನ್ ಶೆಟ್ಟಿ ಮನವಿ ಮಾಡಿದರು.
ಜಯಪ್ರಕಾಶ್ ಶೆಟ್ಟಿ, ಮಂಜುನಾಥ್ ರಾವ್, ರಮೇಶ್ ದೇವಾಡಿಗ, ಚಂದ್ರಶೇಖರ್, ಹರೀಶ್ ಭಟ್ ಧರ್ಮಸ್ಥಳ, ಆನಂದ್ ಶೆಟ್ಟಿ, ಸೌಂದರ್ಯ ನಾಗರಾಜ್, ವಾಸುದೇವ್ ಐತಾಳ್, ಮಾರುತಿ ರಾಮಪೂಜಾರಿ ಹಾಗೂ ರಂಜೀತ್ ಶೆಟ್ಟಿ ಉಪಸ್ಥಿತರಿದ್ದರು.