ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರಕ್ಕೆ ತಿರುಗೇಟು: ನ. 1ರಿಂದ ಬಿಜೆಪಿ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ
ಮಂಗಳೂರು: ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ನಡೆಸಿ ಜನಾದೇಶವನ್ನು ಬುಡಮೇಲು ಮಾಡುವ ಪ್ರಯತ್ನಗಳ ಕುರಿತು ಜನರಿಗೆ ಸತ್ಯಾಂಶ ತಿಳಿಸಲು ಬಿಜೆಪಿ ನವೆಂಬರ್ 1ರಿಂದ 30ರವರೆಗೆ ದೇಶಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ರ‍್ಯಾಲಿ, ಪಾದಯಾತ್ರೆ, ಯುವಕರೊಂದಿಗೆ ಸಂವಾದ ಹಾಗೂ ಪ್ರಬುದ್ಧರ ಗೋಷ್ಠಿ ಸೇರಿದಂತೆ ವಿವಿಧ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಕಂಡುಬಂದ ಅರಾಜಕತೆಯ ಮಾದರಿಯನ್ನು ಭಾರತದಲ್ಲಿಯೂ ಪ್ರಯೋಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಅಸಹಿಷ್ಣುತೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಕೃಷಿ ಕಾಯ್ದೆಗಳು ಮತ್ತು ಇವಿಎಂ ವಿಚಾರಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರ ನಡೆಸಲಾಗಿದೆ ಎಂದು ಟೀಕಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೊಸ ಪ್ರಕ್ರಿಯೆಯಲ್ಲ. ಈ ಹಿಂದೆ ಎಂಟು ಬಾರಿ ನಡೆದಿದ್ದು, ಈಗ ಒಂಬತ್ತನೇ ಬಾರಿ ನಡೆಯುತ್ತಿದೆ ಎಂದು ರವಿ ಹೇಳಿದರು. ಸಂವಿಧಾನದ 324ನೇ ವಿಧಿ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ನಡೆಯುವ ಈ ಪ್ರಕ್ರಿಯೆಯು ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರ ವಿವರಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಉದ್ದೇಶ ಹೊಂದಿದೆ ಎಂದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), ಚುನಾವಣಾ ನೋಂದಣಾಧಿಕಾರಿಗಳು ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರಿಗೂ ಪರಿಶೀಲನೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹೀಗಿರುವಾಗ ಅಕ್ರಮಗಳ ಆರೋಪ ಮಾಡುತ್ತಿರುವ ಕಾಂಗ್ರೆಸ್, ತನ್ನ ಪಕ್ಷದ ಏಜೆಂಟರು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮತದಾರರ ಪಟ್ಟಿಯಿಂದ 13 ಕೋಟಿ ಜನರನ್ನು ಕೈಬಿಡಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಕಾಂಗ್ರೆಸ್ ಬಳಿ ಸಾಕ್ಷ್ಯಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಿ. ಇಲ್ಲದಿದ್ದರೆ ಆಧಾರರಹಿತ ಆರೋಪಗಳಿಗೆ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದರು.
ಇವಿಎಂ ಮೂಲಕ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಗೆದ್ದಾಗ ಜನಾದೇಶವನ್ನು ಒಪ್ಪಿಕೊಂಡು, ಸೋತಾಗ ಮಾತ್ರ ಇವಿಎಂ ಬಗ್ಗೆ ಆರೋಪ ಮಾಡುವುದು ದ್ವಂದ್ವ ನಿಲುವು ಎಂದು ರವಿ ಟೀಕಿಸಿದರು. ಇವಿಎಂ ಬಗ್ಗೆ ನಿಜವಾಗಿಯೂ ಅನುಮಾನವಿದ್ದರೆ, ಅಧಿಕಾರದಲ್ಲಿರುವ ಪಕ್ಷಗಳು ರಾಜೀನಾಮೆ ನೀಡಿ ಬ್ಯಾಲೆಟ್ ಮೂಲಕ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತವೆಯೇ ಎಂದು ಪ್ರಶ್ನಿಸಿದರು.
2014, 2019 ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಎನ್‌ಡಿಎ ಹಾಗೂ ಕಾಂಗ್ರೆಸ್ ಗಳಿಸಿದ ಸ್ಥಾನಗಳ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಚುನಾವಣಾ ಆಯೋಗದ ವಿರುದ್ಧದ ಆರೋಪಗಳನ್ನು ಪರಿಶೀಲಿಸುವಾಗ ಚುನಾವಣಾ ಫಲಿತಾಂಶಗಳನ್ನೂ ಗಮನಿಸಬೇಕು ಎಂದರು.
ಕಾಂಗ್ರೆಸ್‌ನ ಹಿಂದಿನ ಆಡಳಿತವನ್ನು ಪ್ರಸ್ತಾಪಿಸಿದ ರವಿ, ತುರ್ತು ಪರಿಸ್ಥಿತಿ ಹೇರಿಕೆ ಸೇರಿದಂತೆ ಹಲವು ಘಟನೆಗಳು ಪ್ರಜಾಪ್ರಭುತ್ವದ ಕುರಿತ ಅದರ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಟೀಕಿಸಿದರು. ಸಂವಿಧಾನಿಕ ಸಂಸ್ಥೆಗಳ ಮೇಲಿನ ವಿಶ್ವಾಸವನ್ನು ಉಳಿಸುವುದು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಬಿಜೆಪಿ ಅಭಿಯಾನದ ಉದ್ದೇಶ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ದಕ್ಷಿಣ ಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗಣೇಶ್ ಕಾರ್ಣಿಕ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.