ಚಾಕು ಕಳುಹಿಸಿ ಬೆದರಿಸಿದರೆ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ತಮ್ಮ ವಿಳಾಸಕ್ಕೆ ಚಾಕು, ಚೂರಿಗಳನ್ನು ಕಳುಹಿಸಿ ಬೆದರಿಸುವ ಮೂಲಕ ತಮ್ಮ ಧ್ವನಿಯನ್ನು ಅಡಗಿಸಬಹುದು ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ಹಗಲುಗನಸು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ನಾನು ಇಂತಹ ಬೆದರಿಕೆಗಳಿಗೆ ಬಗ್ಗುವವನೂ ಅಲ್ಲ, ಹೆದರುವವನೂ ಅಲ್ಲ. ನನ್ನಲ್ಲಿ ಹರಿಯುತ್ತಿರುವುದು ಬಾಬಾಸಾಹೇಬರ ವಿಚಾರಧಾರೆ ಮತ್ತು ಸ್ವಾಭಿಮಾನದ ರಕ್ತ. ಹೋರಾಟದ ಹಾದಿಯಲ್ಲಿ ಬೆಳೆದು ಬಂದ ನನಗೆ ಬೆದರಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ಸುಮ್ಮನೆ ಬಿಡುವುದಿಲ್ಲ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಕರಣವನ್ನು ಪ್ರಸ್ತಾಪಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್‌ನ ಇಂತಹ ರಾಜಕಾರಣಕ್ಕೆ ಪ್ರಜಾಪ್ರಭುತ್ವದ ಹಾದಿಯಲ್ಲಿ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.