Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಕೇಂದ್ರ ಸಮಿತಿ ರಚನೆ

By ANU News
October 15, 2026 2 Min Read
0

ನವದೆಹಲಿ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಶೀಲಿಸಿ, ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರವು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಹಾಗೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರು, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರ ನಡುವೆ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಬ್ಬು ಬೆಳೆಗಾರರಿಗೆ ಹೆಚ್ಚಿನ ಲಾಭದಾಯಕ ಆದಾಯ ದೊರೆಯಬೇಕು ಎಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ಅಂಶಗಳನ್ನು ಸಮಿತಿ ಪರಿಶೀಲಿಸಲಿದೆ. ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯಿಂದ ದೊರೆಯುವ ಆದಾಯ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಪರಿಗಣಿಸಿ, ಕಾರ್ಖಾನೆ ಮಟ್ಟದ ಸಕ್ಕರೆಯ ಕನಿಷ್ಠ ಮಾರಾಟ ದರದ (ಎಕ್ಸ್‌-ಮಿಲ್‌ ಬೆಲೆ) ಪರಿಶೀಲನೆಯನ್ನೂ ನಡೆಸಲಿದೆ.

ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನಿಂದ ದೊರೆಯುವ ಸಕ್ಕರೆಯ ಪ್ರಮಾಣವನ್ನು ನಿರ್ಧರಿಸುವ ಇಳುವರಿ (ರಿಕವರಿ) ಪರೀಕ್ಷೆ ಹಾಗೂ ವರದಿ ಮಾಡುವ ಪ್ರಸ್ತುತ ವಿಧಾನಗಳನ್ನು ಸಮಿತಿ ಮೌಲ್ಯಮಾಪನ ಮಾಡಲಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲಿದೆ.

ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವ ವ್ಯವಸ್ಥೆ, ತೂಕದ ಯಂತ್ರಗಳ ಮಾಪನಾಂಕ ನಿರ್ಣಯ (ಕ್ಯಾಲಿಬ್ರೇಷನ್), ತಪಾಸಣೆ ಮತ್ತು ಪರಿಶೀಲನಾ ಕ್ರಮಗಳ ಸಮರ್ಪಕತೆಯನ್ನೂ ಪರಿಶೀಲಿಸಲಾಗುತ್ತದೆ.

ಯಾಂತ್ರೀಕೃತವಾಗಿ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಕಡಿತ ಮಾಡುವ ಪದ್ಧತಿಯ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಯಾಂತ್ರೀಕೃತ ಕಟಾವಿನಿಂದ ಉಂಟಾಗುವ ನೈಜ ನಷ್ಟವನ್ನು ಅಂದಾಜಿಸುವುದರ ಜತೆಗೆ, ಅದರಿಂದ ರೈತರಿಗೆ ಪಾವತಿಸುವ ಹಣದ ಮೇಲೆ ಆಗುವ ಪರಿಣಾಮವನ್ನೂ ಮೌಲ್ಯಮಾಪನ ಮಾಡಲಿದೆ.

ಅಗತ್ಯವಿದ್ದಲ್ಲಿ ಕಬ್ಬು ಬೆಳೆಗಾರರ ಹಿತಾಸಕ್ತಿಗೆ ಸಂಬಂಧಿಸಿದ ಇತರ ವಿಷಯಗಳನ್ನೂ ಸಮಿತಿ ಪರಿಶೀಲಿಸಬಹುದು.

ಸಮಿತಿಯು ರೈತರ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಸಂಘಗಳು, ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ತಜ್ಞರು ಮತ್ತು ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಿದೆ. ಬಳಿಕ ತನ್ನ ವರದಿ ಮತ್ತು ನಿರ್ದಿಷ್ಟ ಶಿಫಾರಸುಗಳನ್ನು ಸಮರ್ಥ ಪ್ರಾಧಿಕಾರದ ಪರಿಶೀಲನೆಗಾಗಿ ಆದಷ್ಟು ಶೀಘ್ರದಲ್ಲಿ ಸಲ್ಲಿಸಲಿದೆ.

ಕೃಷಿ ಅರ್ಥಶಾಸ್ತ್ರಜ್ಞ ಹಾಗೂ ಸಾರ್ವಜನಿಕ ನೀತಿ ತಜ್ಞ ಪ್ರೊ. ರಮೇಶ್ ಚಂದ್ ಅವರು 2015ರಿಂದ 2026ರವರೆಗೆ ನೀತಿ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರ ಮತ್ತು ನೀತಿ ಸಂಶೋಧನಾ ಸಂಸ್ಥೆಯ (ICAR-NIAP) ನಿರ್ದೇಶಕರಾಗಿದ್ದರು. ಹದಿನೈದನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಮಿತಿಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕೃಷಿ ಆಯುಕ್ತರು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಸಕ್ಕರೆ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾನೂನು ಮಾಪನಶಾಸ್ತ್ರ ವಿಭಾಗದ ಜಂಟಿ ಕಾರ್ಯದರ್ಶಿ ಸದಸ್ಯರಾಗಿರಲಿದ್ದಾರೆ.

Author

ANU News

Follow Me
Other Articles
Previous

Centre Forms Panel to Address Sugarcane Farmers’ Concerns, Review Sugar Prices

Next

DRI Busts ₹30-Crore Pakistan Rock Salt Smuggling Network; Four Arrested

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • 11.4 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್: ಕೇಂದ್ರ ಸಚಿವ ಸಂಪುಟದ ಅನುಮೋದನೆ
    • Centre approves IDBI Bank stake sale, marking major FDI deal in financial sector
    • ತುಳು ಭಾಷೆ ಕಲಿಕೆ ಇನ್ನು ಸುಲಭ; ಇಂಗ್ಲಿಷ್, ಕನ್ನಡ ಭಾಷಿಗರಿಗಾಗಿ ಎರಡು ಪರಿಷ್ಕೃತ ಪುಸ್ತಕಗಳ ಬಿಡುಗಡೆ
    • ಪಾಕಿಸ್ತಾನದ ರಾಕ್ ಸಾಲ್ಟ್ ಕಳ್ಳಸಾಗಣೆ ಜಾಲ ಭೇದಿಸಿದ ಡಿಆರ್‌ಐ; ನಾಲ್ವರ ಬಂಧನ
    • DRI Busts ₹30-Crore Pakistan Rock Salt Smuggling Network; Four Arrested
    Copyright 2026 — ANU News. All rights reserved. Blogsy WordPress Theme