ಮೇಕೆದಾಟು, ಮಹದಾಯಿ ಯೋಜನೆಗೆ ಕೇಂದ್ರದ ಅಸಹಕಾರ: ಸಚಿವ ಚಲುವರಾಯಸ್ವಾಮಿ ಆಕ್ರೋಶ
ಬೆಂಗಳೂರು: ಕುಡಿಯುವ ನೀರಿನ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಮೇಕೆದಾಟು ಮತ್ತು ಮಹದಾಯಿಯಂತಹ ಪ್ರಮುಖ ಯೋಜನೆಗಳಿಗೂ ಕೇಂದ್ರದಿಂದ ಸಹಕಾರ ದೊರೆಯುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ, ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ವಿಸ್ಮಯ ಬುಕ್ ಹೌಸ್ ವತಿಯಿಂದ ಆಯೋಜಿಸಿದ್ದ ಎಂ.ಕೆ. ವೆಂಕಟರಾಮು ಅವರ ‘ದಿ ಎವರ್‌ಗ್ರೀನ್ ಕಾವೇರಿ ಕಾನ್‌ಫ್ಲಿಕ್ಟ್’ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ಯೋಜನೆಗಳ ವಿಚಾರದಲ್ಲಿ ಇತರೆ ರಾಜ್ಯಗಳು ತಕರಾರು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಗೋವಾ ರಾಜ್ಯದ ಒತ್ತಡದಿಂದ ಮಹದಾಯಿ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಅನುಮತಿ ದೊರೆತಿಲ್ಲ. ರಾಜ್ಯದ ಜನರ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು. ರಾಜ್ಯದ ಬಾಯಾರಿಕೆಯ ಬಗ್ಗೆ ಕೇಂದ್ರ ಕಿಂಚಿತ್ತಾದರೂ ಗಮನ ಹರಿಸಲಿ ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.