SIR: ಅರ್ಹ ಮತದಾರರ ಹಕ್ಕು ರಕ್ಷಿಸಲು ಆಯೋಗಕ್ಕೆ MLC ರಮೇಶ್ ಬಾಬು ಆಗ್ರಹ
ಬೆಂಗಳೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ 80 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಅರ್ಹ ಮತದಾರರ ಹಕ್ಕು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಬರೆದಿರುವ ಪತ್ರದಲ್ಲಿ, ಮಾಧ್ಯಮ ವರದಿಗಳ ಪ್ರಕಾರ ಒಟ್ಟು ಮತದಾರರ ಪೈಕಿ ಸುಮಾರು 15 ಶೇಕಡಾ, ಅಂದರೆ 80 ಲಕ್ಷಕ್ಕೂ ಅಧಿಕ ಮತದಾರರನ್ನು ಗೈರುಹಾಜರು, ಸ್ಥಳಾಂತರ, ಬಹು ನೋಂದಣಿ, ASDDO ಸೇರಿದಂತೆ ವಿವಿಧ ವರ್ಗಗಳಲ್ಲಿ ಗುರುತಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸಮರ್ಪಕ ಪರಿಶೀಲನೆ ಇಲ್ಲದೆ ಹೆಸರುಗಳನ್ನು ಕೈಬಿಟ್ಟರೆ ಸಾವಿರಾರು ಅರ್ಹ ಮತದಾರರು ತಮ್ಮ ಸಂವಿಧಾನಬದ್ಧ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಗೈರುಹಾಜರು ಮತ್ತು ಸ್ಥಳಾಂತರಗೊಂಡಿರುವುದಾಗಿ ಗುರುತಿಸಲಾದ ಎಲ್ಲ ಪ್ರಕರಣಗಳಲ್ಲಿ ಮರು ಭೌತಿಕ ಪರಿಶೀಲನೆ, ಹೆಸರು ಕೈಬಿಡುವ ಮೊದಲು ಕಡ್ಡಾಯ ನೋಟಿಸ್, ಗ್ರಾಮ, ವಾರ್ಡ್ ಹಾಗೂ ಮತಗಟ್ಟೆ ಮಟ್ಟದಲ್ಲಿ ಮತದಾರರ ಸಹಾಯ ಕೇಂದ್ರಗಳ ಸ್ಥಾಪನೆ, ವಿಧಾನಸಭಾ ಕ್ಷೇತ್ರವಾರು ಅಂಕಿ-ಅಂಶಗಳನ್ನು ಸಾರ್ವಜನಿಕಗೊಳಿಸುವುದು, ರಾಜಕೀಯ ಪಕ್ಷಗಳಿಗೆ ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವುದು ಹಾಗೂ ವಯೋವೃದ್ಧರು, ಮಹಿಳೆಯರು, ಅಂಗವಿಕಲರು, ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರೂ ಆದ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಮತದಾರರ ನೋಂದಣಿ ಕುರಿತು ಕೆಲವು ವ್ಯಕ್ತಿಗಳು ಹಾಗೂ ರಾಜಕೀಯ ಸಂಘಟನೆಗಳು ತಪ್ಪು ಮಾಹಿತಿ ಹರಡುತ್ತಿರುವುದಾಗಿ ಆರೋಪಿಸಿರುವ ಕಾಂಗ್ರೆಸ್, ಇಂತಹ ಸುಳ್ಳು ಪ್ರಚಾರಗಳ ವಿರುದ್ಧ ಚುನಾವಣಾ ಆಯೋಗ ಸಾರ್ವಜನಿಕ ಸ್ಪಷ್ಟನೆ ನೀಡಬೇಕು ಹಾಗೂ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
SIR ಪ್ರಕ್ರಿಯೆಯ ಉದ್ದೇಶ ಅನರ್ಹ ಮತದಾರರನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕುವುದಾಗಿದ್ದು, ಯಾವುದೇ ಅರ್ಹ ಮತದಾರರು ಆಡಳಿತಾತ್ಮಕ ಅಥವಾ ಪ್ರಕ್ರಿಯಾತ್ಮಕ ಲೋಪಗಳಿಂದ ಮತದಾನದ ಹಕ್ಕು ಕಳೆದುಕೊಳ್ಳದಂತೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಕೆಪಿಸಿಸಿ ಚುನಾವಣಾ ಆಯೋಗವನ್ನು ರಮೇಶ್ ಬಾಬು ಮನವಿ ಮಾಡಿದ್ದಾರೆ.