ಅ. 15ರಂದು ಮಂಗಳೂರಿನ ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಆರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿ ಅಕ್ಟೋಬರ್ 15ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.
ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಭಾಷೆಗಳ ಕವಿಗಳು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲಿದ್ದಾರೆ.
ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಡಾ. ವಾಸುದೇವ ಬೆಳ್ಳೆ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ‘ಪೂವರಿ’ ತುಳು ಪತ್ರಿಕೆಯ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಡಾ. ಝೀಟಾ ಲೋಬೋ ಹಾಗೂ ಕವಿ ಯು.ಕೆ. ಖಾಲಿದ್ ಉಳ್ಳಾಲ್ಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಯೂರಿ ಫೌಂಡೇಶನ್ ಟ್ರಸ್ಟಿ ಪ್ರಬೋಧ್ ಕುಡ್ವ ಮುಲ್ಕಿ ಹಾಗೂ ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಉಪಸ್ಥಿತರಿರುವರು.

14 ಭಾಷೆಗಳ ಕವಿಗಳಿಂದ ಕವಿತೆ ವಾಚನ
ಕವಿಗೋಷ್ಠಿಯಲ್ಲಿ ತುಳು, ಶಿವಳ್ಳಿ ತುಳು, ಮಾವಿಲನ್ ತುಳು, ಅರೆಭಾಷೆ, ಚಿತ್ಪಾವನಿ, ಬ್ಯಾರಿ, ಮರಾಠಿ, ಕೊಂಕಣಿ, ಕುಂದಗನ್ನಡ, ಕೊರಗ ಭಾಷೆ, ಕರಾಡ, ಮಲಯಾಳಂ, ಕನ್ನಡ ಮತ್ತು ಹವ್ಯಕ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ.
ಶಾರದಾ ಶೆಟ್ಟಿ, ವಿಜಯರಾಜ್ ಪುಣಿಂಚತ್ತಾಯ, ರಾಜೇಂದ್ರ ಟಿ. ಕಾರಿಕೆ, ಪ್ರೊ. ಸಂಜೀವ ಕುದ್ಪಾಜೆ, ಶರತ್ ಕುಮಾರ್ ತುಳುಪುಳೆ, ಆಯಿಷಾ ಯು.ಕೆ., ಸುಭಾಷ್ ಪೆರ್ಲ, ಆಂಡ್ರ್ಯೂ ಎಲ್. ಡಿ. ಡಿಕೂನ್ಹಾ, ಮಂಜುನಾಥ ಗುಂಡ್ಮಿ, ದೀಪಿಕಾ ಉಡುಪಿ, ಜೋತ್ಸ್ನಾ ಎಂ. ಕಡಂದೇಲು, ರವೀಂದ್ರನ್ ಪಾಡಿ, ಶ್ರೀ ಮುದ್ರಾಡಿ, ಮಂಗಳಾ ಎಸ್. ಭಟ್, ವನಜಾಕ್ಷಿ ಪಿ. ಚೆಂಬ್ರಕಾನ ಹಾಗೂ ಎನ್. ಸುಬ್ರಾಯ ಭಟ್ ಕವಿತೆಗಳನ್ನು ವಾಚಿಸಲಿದ್ದಾರೆ.
ಬಹುಭಾಷೆಗಳ ಸಾಹಿತ್ಯಿಕ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವುದು ಹಾಗೂ ಕರಾವಳಿಯ ಭಾಷಾ ವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ಕವಿಗೋಷ್ಠಿಯ ಉದ್ದೇಶವಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.