ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯ ಕೈಬಿಡಬೇಡಿ: ಸಂಸದ ಡಾ.ಕೆ.ಸುಧಾಕರ್ ಆಗ್ರಹ
ಬೆಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯವನ್ನು ಕೈಬಿಡದೆ, ಹಿಂದಿನ ವಿನ್ಯಾಸದಂತೆ ಕನಿಷ್ಠ 5ರಿಂದ 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಅನುಷ್ಠಾನ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶೀಘ್ರ ನೀರು ಪೂರೈಸಲು ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಿದರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಗುತ್ತಿಗೆದಾರರಿಗೆ ಬಾಕಿ ಪಾವತಿಸಿ ಕಾಮಗಾರಿ ಸ್ಥಗಿತವಾಗದಂತೆ ಕ್ರಮ ವಹಿಸಬೇಕು ಎಂದರು.
ಬಳಿಕ ಮಾತನಾಡಿದ ಅವರು, ಹಿಂದಿನ ವಿನ್ಯಾಸದ ಬೈರಗೊಂಡ್ಲು ಜಲಾಶಯದಲ್ಲಿ 6 ಟಿಎಂಸಿ ನೀರು ಸಂಗ್ರಹಿಸುವ ಅವಕಾಶವಿತ್ತು. ಆದರೆ ಅದನ್ನು ಕೈಬಿಟ್ಟು ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿಯಲ್ಲಿ 1.6ರಿಂದ 1.8 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ನಿರ್ಧಾರದಿಂದ ಮೂರು ಜಿಲ್ಲೆಗಳ ರೈತರಿಗೆ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಯೋಜನೆಯಡಿ ಒಟ್ಟು 24.1 ಟಿಎಂಸಿ ನೀರನ್ನು ವಿವಿಧ ಜಿಲ್ಲೆಗಳಿಗೆ ಹಂಚಬೇಕಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ 7ರಿಂದ 8 ಟಿಎಂಸಿ ನೀರು ಮಾತ್ರ ಲಭ್ಯವಾಗಿದೆ. ಇಷ್ಟು ಕಡಿಮೆ ನೀರನ್ನು ಎಲ್ಲ ಜಿಲ್ಲೆಗಳಿಗೆ ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು ಎಂದು ಹೇಳಿದರು.
ಭೂಸ್ವಾಧೀನಕ್ಕೆ ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸುವ ಬದಲು ಸಹಾಯಕ ಆಯುಕ್ತರಿಗೂ ಅಧಿಕಾರ ನೀಡಬೇಕು. ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.