ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ: ಡೆಮಾಕ್ರಾಟ್‌ಗಳ ವರದಿಯಲ್ಲಿ ಗಂಭೀರ ಹೇಳಿಕೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲೆಂಡ್ ಬೀಟ್ರಿಸ್ ಕೆಯುಲ್ ಅವರು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ ಎಂದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಡೆಮಾಕ್ರಟಿಕ್ ಸದಸ್ಯರು ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. 1993ರ ನವೆಂಬರ್‌ನಲ್ಲಿ ಟ್ರಂಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಕೆಯುಲ್ ಆರೋಪಿಸಿರುವುದಾಗಿ ವರದಿ ತಿಳಿಸಿದೆ. ಆದರೆ, ಈ ಆರೋಪಗಳನ್ನು ಶ್ವೇತಭವನ ನಿರಾಕರಿಸಿದೆ.
ಲೈಂಗಿಕ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಜೆಫ್ರಿ ಎಪ್ಸ್ಟೀನ್ ಜತೆ ಟ್ರಂಪ್ ಹೊಂದಿದ್ದ ಸಂಬಂಧಗಳ ಕುರಿತು ನಡೆದ ತನಿಖೆಯ ಭಾಗವಾಗಿ 53 ಪುಟಗಳ ವರದಿ ಸಿದ್ಧಪಡಿಸಲಾಗಿದೆ. 2019ರಲ್ಲಿ ಫೆಡರಲ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟ ಎಪ್ಸ್ಟೀನ್ ಜತೆಗಿನ ಟ್ರಂಪ್ ಅವರ ಹಿಂದಿನ ನಂಟು ಹಾಗೂ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ದುರುಪಯೋಗದ ಆರೋಪಗಳನ್ನು ವರದಿ ಪರಿಶೀಲಿಸಿದೆ.

ಡೆಮಾಕ್ರಟಿಕ್ ಸದಸ್ಯರೊಂದಿಗೆ ನಡೆಸಿದ ಸಂದರ್ಶನಗಳಲ್ಲಿ ಕೆಯುಲ್ ತಮ್ಮ ಅನುಭವವನ್ನು ವಿವರಿಸಿದ್ದಾರೆ ಎಂದು ವರದಿ ಹೇಳಿದೆ. ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದರಲ್ಲಿ ತಾವು 24 ವರ್ಷದವರಾಗಿದ್ದಾಗ ಟ್ರಂಪ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗಿ ಅವರು ಹೇಳಿದ್ದಾರೆ. ಬಳಿಕ, ವೀಸಾ ವ್ಯವಸ್ಥೆ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಕಲ್ಪಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಕೆಯುಲ್ ಅವರ ಹೇಳಿಕೆಯ ಪ್ರಕಾರ, ಎಪ್ಸ್ಟೀನ್ ಅವರನ್ನು ಮಾರ್-ಎ-ಲಾಗೊದಲ್ಲಿ ನಡೆಯುವ ಪಾರ್ಟಿಗೆ ಆಹ್ವಾನಿಸಿದ ಬಳಿಕ, ಟ್ರಂಪ್ ಅವರ ಪ್ರತಿನಿಧಿಯೊಬ್ಬರು ಪ್ಲಾಜಾ ಹೋಟೆಲ್‌ನ ಮೇಲಿನ ಮಹಡಿಯಲ್ಲಿ ಅವರನ್ನು ಭೇಟಿಯಾಗುವಂತೆ ಆಹ್ವಾನಿಸಿದ್ದರು. ಅಲ್ಲಿ ಟ್ರಂಪ್ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದರು, ಉಡುಪನ್ನು ಹರಿದು ಗಾಯಗೊಳಿಸಿದರು ಎಂದು ಕೆಯುಲ್ ಆರೋಪಿಸಿದ್ದಾರೆ. ಘಟನೆಯ ಬಳಿಕ ಮೌನವಾಗಿರುವಂತೆ ಸೂಚಿಸಿ, ವೀಸಾ ಮತ್ತು ವಿಶ್ವವಿದ್ಯಾಲಯ ಪ್ರವೇಶದ ಭರವಸೆಗಳನ್ನು ಪುನರುಚ್ಚರಿಸಿದ್ದರು ಎಂದೂ ಅವರು ಹೇಳಿದ್ದಾರೆ.