H1N1 ಬಗ್ಗೆ ಭಯ ಬೇಡ; ಭಾರತದಲ್ಲಿ ಹರಡುತ್ತಿರುವ ವೈರಸ್ ಸಾಮಾನ್ಯ ಕಾಲೋಚಿತ ಮಾದರಿಗೆ ಅನುಗುಣ
ನವದೆಹಲಿ: ದೇಶದಲ್ಲಿ ಕಾಲೋಚಿತ ಉಸಿರಾಟದ ಕಾಯಿಲೆಗಳ ಪರಿಸ್ಥಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಆರೋಗ್ಯ ಸಂಶೋಧನಾ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಸಹಯೋಗದಲ್ಲಿ ರಾಷ್ಟ್ರವ್ಯಾಪಿ ಕಣ್ಗಾವಲು ಜಾಲದ ಮೂಲಕ ನಿಗಾ ವಹಿಸಲಾಗುತ್ತಿದೆ.
ಭಾರತದಲ್ಲಿ ಪ್ರಸ್ತುತ ಹರಡುತ್ತಿರುವ ಇನ್ಫ್ಲುಯೆನ್ಸ ವೈರಸ್‌ಗಳು ಇತ್ತೀಚಿನ ವರ್ಷಗಳ ಕಾಲೋಚಿತ ಮಾದರಿಗೆ ಅನುಗುಣವಾಗಿವೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ICMR ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ತಿಳಿಸಿದ್ದಾರೆ.
73 ICMR-DHR ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳ ಜೀನೋಮಿಕ್ ಕಣ್ಗಾವಲಿನಲ್ಲಿ 2025ರಿಂದ ಭಾರತದಲ್ಲಿ ಹರಡುತ್ತಿರುವ ವಂಶಾವಳಿಗೆ ಸೇರಿದ ಇನ್ಫ್ಲುಯೆನ್ಸ A (H1N1) ವೈರಸ್‌ಗಳು ಪತ್ತೆಯಾಗಿವೆ. ವೈರಸ್‌ನಲ್ಲಿ ಕಂಡುಬಂದ ಆನುವಂಶಿಕ ಬದಲಾವಣೆಗಳು ಸಾಮಾನ್ಯ ಕಾಲೋಚಿತ ‘ಆ್ಯಂಟಿಜೆನಿಕ್ ಡ್ರಿಫ್ಟ್’ಗೆ ಅನುಗುಣವಾಗಿದ್ದು, ಹೊಸ ಅಥವಾ ಹೆಚ್ಚು ಅಪಾಯಕಾರಿ ತಳಿಯ ಉದ್ಭವವನ್ನು ಸೂಚಿಸುವುದಿಲ್ಲ ಎಂದು ಬಹ್ಲ್ ಹೇಳಿದ್ದಾರೆ.

ಆರೋಗ್ಯವಂತ ವ್ಯಕ್ತಿಗಳಲ್ಲಿ H1N1 ಸೇರಿದಂತೆ ಕಾಲೋಚಿತ ಇನ್ಫ್ಲುಯೆನ್ಸ ಸಾಮಾನ್ಯವಾಗಿ ಸೌಮ್ಯವಾಗಿದ್ದು, ಸ್ವಯಂ ನಿಯಂತ್ರಣಗೊಳ್ಳುತ್ತದೆ. ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು, ದೇಹದ ನೋವು ಮತ್ತು ಆಯಾಸ ಪ್ರಮುಖ ಲಕ್ಷಣಗಳಾಗಿವೆ.
ವೃದ್ಧರು, ಚಿಕ್ಕ ಮಕ್ಕಳು, ಇತರ ಆರೋಗ್ಯ ಸಮಸ್ಯೆ ಹೊಂದಿರುವವರು ಹಾಗೂ ದುರ್ಬಲ ರೋಗನಿರೋಧಕ ಶಕ್ತಿ ಇರುವವರು ತೊಡಕುಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆಯಿರುವುದರಿಂದ, ಲಕ್ಷಣಗಳು ಕಂಡುಬಂದರೆ ಸಮಯಕ್ಕೆ ವೈದ್ಯಕೀಯ ಸಲಹೆ ಪಡೆಯುವಂತೆ ಸೂಚಿಸಲಾಗಿದೆ.
ಉಸಿರಾಟದ ನೈರ್ಮಲ್ಯ ಕಾಪಾಡುವುದು, ಕೈಗಳನ್ನು ಆಗಾಗ್ಗೆ ತೊಳೆಯುವುದು, ಅನಾರೋಗ್ಯದ ಸಂದರ್ಭದಲ್ಲಿ ಮನೆಯಲ್ಲೇ ಇರುವುದು ಮತ್ತು ಸಾಕಷ್ಟು ನೀರು ಸೇವಿಸುವಂತೆ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ಮುಂದುವರಿದರೆ ವೈದ್ಯಕೀಯ ನೆರವು ಪಡೆಯಬೇಕು. ವೈದ್ಯರ ಸಲಹೆಯಿಲ್ಲದೆ ಪ್ರತಿಜೀವಕ ಅಥವಾ ಆಂಟಿವೈರಲ್ ಔಷಧ ಸೇವಿಸದಂತೆ ಜನರಿಗೆ ಸೂಚಿಸಲಾಗಿದೆ.