ಸಭಾಪತಿ ರಾಜೀನಾಮೆ ವಿವಾದ; ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ನಿಯೋಗ ದೂರು
ಬೆಂಗಳೂರು: ಮುಖ್ಯಮಂತ್ರಿ ಬದಲಾಗಿ ಸಂಪುಟ ಪುನಾರಚನೆಯಾಗುತ್ತಿದ್ದಂತೆಯೇ ವಿಧಾನ ಪರಿಷತ್ತಿನ ಚಿತ್ರಣವೂ ಬದಲಾಗಿದೆ. ಇದೀಗ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮೇಲ್ಮನೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿದೆ.
ಈ ಸನ್ನಿವೇಶವನ್ನೇ ಮುಂದಿಟ್ಟು ಕಾಂಗ್ರೆಸ್ ಪಕ್ಷವು ಮೇಲ್ಮನೆಯಲ್ಲಿ ಹಿಡಿತ ಸಾಧಿಸಲು ಕಾರ್ಯತಂತ್ರ ರೂಪಿಸಿದೆ. ಸಚಿವ ಸ್ಥಾನ ವಂಚಿತ ನಾಯಕರನ್ನು ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಉಪಸಭಾಪತಿ ಸ್ಥಾನಕ್ಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಭಾಪತಿ ಬಸವರಾಜ ಹೊರಟ್ಟಿ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆರಂಭದಲ್ಲಿ ರಾಜೀನಾಮೆಗೆ ಒಪ್ಪದ ಹೊರಟ್ಟಿಯವರು ಬಳಿಕ ಅವಿಶ್ವಾಸ ನಿರ್ಣಯಕ್ಕೆ ಬೆದರಿ ಪದತ್ಯಾಗ ಮಾಡಿದ್ದಾರೆ.

ಈ ಬೆಳವಣಿಗೆಯು ಪ್ರತಿಪಕ್ಷಗಳನ್ನು ಕೆರಳುವಂತೆ ಮಾಡಿದೆ. ಈ ವಿವಾದವನ್ನು ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯಪಾಲರ ಅಂಗಳಕ್ಕೆ ಒಯ್ದಿದ್ದು, ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿತು. ವಿಧಾನ ಪರಿಷತ್ ಸದಸ್ಯರಾದ ಪಿ. ಹೆಚ್. ಪೂಜಾರ್, ಗೋಪಿನಾಥ್ ರೆಡ್ಡಿ, ಶರವಣ ಸೇರಿದಂತೆ ನಾಯಕರನೇಕರು ನಿಯೋಗದಲ್ಲಿದ್ದರು.
ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರಿಂದ ಗೂಂಡಾಗಿರಿ ಮಾದರಿಯಲ್ಲಿ ಬಲವಂತವಾಗಿ ರಾಜೀನಾಮೆ ಪಡೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗವು ರಾಜ್ಯಪಾಲರನ್ನು ಕೋರಿದೆ.