ತೈಲ ಮಾರುಕಟ್ಟೆ ಸ್ಥಿರತೆ, ಇಂಧನ ಭದ್ರತೆ: ಭಾರತ–OPEC ಚರ್ಚೆ
ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯ ಸ್ಥಿತಿ, ಇಂಧನ ಭದ್ರತೆ ಹಾಗೂ ಪೆಟ್ರೋಲಿಯಂ ವಲಯದಲ್ಲಿನ ಹೂಡಿಕೆ ಅಗತ್ಯಗಳ ಕುರಿತು ಭಾರತ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಚರ್ಚೆ ನಡೆಸಿವೆ.
ನವದೆಹಲಿಯಲ್ಲಿ ನಡೆದ ‘OPEC–ಭಾರತ ಇಂಧನ ಸಂವಾದ’ದ 7ನೇ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ OPEC ಪ್ರಧಾನ ಕಾರ್ಯದರ್ಶಿ ಹೈಥಮ್ ಅಲ್ ಘೈಸ್ ಸಹ-ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ತೈಲ ಮಾರುಕಟ್ಟೆಯ ಅಲ್ಪ, ಮಧ್ಯಮ ಹಾಗೂ ದೀರ್ಘಾವಧಿಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಿತು. ಜಾಗತಿಕ ಇಂಧನ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಧನ ಕ್ಷೇತ್ರದಲ್ಲಿ ಸಮಯೋಚಿತ ಮತ್ತು ಸಮರ್ಪಕ ಹೂಡಿಕೆ ಅಗತ್ಯ ಎಂದು ಎರಡೂ ಕಡೆಯವರು ಒತ್ತಿ ಹೇಳಿದರು.
ಭಾರತ ಮತ್ತು OPEC ನಡುವಿನ ಸಂಬಂಧವು ಪರಸ್ಪರ ಪೂರಕ ಹಾಗೂ ಲಾಭದಾಯಕವಾಗಿದೆ ಎಂದು ಪುರಿ ಹೇಳಿದರು. ಇಂಧನ ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರಗಳ ನಡುವೆ ನಿರಂತರ ಸಂವಾದ ಅತ್ಯಗತ್ಯ ಎಂದ ಅವರು, ಭಾರತದ ಬೆಳೆಯುತ್ತಿರುವ ಆರ್ಥಿಕತೆ ಮುಂದಿನ ದಶಕಗಳಲ್ಲಿ ಜಾಗತಿಕ ಇಂಧನ ಬೇಡಿಕೆಯ ಪ್ರಮುಖ ಚಾಲಕವಾಗಲಿದೆ ಎಂದು ಹೇಳಿದರು.

ಭೂ-ರಾಜಕೀಯ ಅನಿಶ್ಚಿತತೆ ಮತ್ತು ಮಾರುಕಟ್ಟೆ ಏರಿಳಿತಗಳ ನಡುವೆಯೂ ಸ್ಥಿರ ಹಾಗೂ ಪಾರದರ್ಶಕ ಜಾಗತಿಕ ಇಂಧನ ಮಾರುಕಟ್ಟೆಗಾಗಿ OPEC ಕೈಗೊಳ್ಳುತ್ತಿರುವ ಕ್ರಮಗಳನ್ನು ಪುರಿ ಶ್ಲಾಘಿಸಿದರು. ವಿಶ್ವಾಸಾರ್ಹ ಇಂಧನ ಪೂರೈಕೆ ಮತ್ತು ಇಂಧನ ಸ್ಥಿತಿಸ್ಥಾಪಕತ್ವ ಬಲಪಡಿಸಲು ಭಾರತ–OPEC ಸಹಕಾರ ಮತ್ತಷ್ಟು ಗಟ್ಟಿಯಾಗಬೇಕು ಎಂದು ಹೇಳಿದರು.
ಜಾಗತಿಕ ಇಂಧನ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಹೈಥಮ್ ಅಲ್ ಘೈಸ್, ಭಾರತದೊಂದಿಗಿನ ಸಂವಾದ OPECಗೆ ಪ್ರಮುಖ ಆದ್ಯತೆಯಾಗಿದೆ ಎಂದರು.
2015ರಲ್ಲಿ ನವದೆಹಲಿಯಲ್ಲಿ ಆರಂಭವಾದ OPEC–ಭಾರತ ಇಂಧನ ಸಂವಾದ ಕಳೆದ 11 ವರ್ಷಗಳಿಂದ ಮುಂದುವರಿದಿದೆ. ಇಂಧನ ಕ್ಷೇತ್ರದ ಸವಾಲುಗಳನ್ನು ಎದುರಿಸುವಲ್ಲಿ ಭಾರತದ ಕ್ರಮಗಳನ್ನು ಅಲ್ ಘೈಸ್ ಶ್ಲಾಘಿಸಿದರು. ಭಾರತದ ಹಲವು ಇಂಧನ ಆದ್ಯತೆಗಳು OPECನ ಆದ್ಯತೆಗಳೊಂದಿಗೆ ಹೊಂದಾಣಿಕೆ ಹೊಂದಿವೆ ಎಂದರು.
ಸಭೆಯಲ್ಲಿ ತಾಂತ್ರಿಕ ಮಟ್ಟದ ಸಹಕಾರ ಸೇರಿದಂತೆ ಇದುವರೆಗೆ ನಡೆದ ಪ್ರಗತಿಯನ್ನು ಪರಿಶೀಲಿಸಲಾಯಿತು. ಇಂಧನ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಎರಡೂ ಕಡೆಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯಕ್ಕೂ ಒತ್ತು ನೀಡಲಾಯಿತು.
ಮುಂದಿನ 8ನೇ ಉನ್ನತ ಮಟ್ಟದ OPEC–ಭಾರತ ಇಂಧನ ಸಂವಾದವನ್ನು ಆಸ್ಟ್ರಿಯಾದ ವಿಯೆನ್ನಾದಲ್ಲಿ, ಪರಸ್ಪರ ಅನುಕೂಲಕರ ದಿನಾಂಕದಲ್ಲಿ ನಡೆಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.