ಕರ್ನಾಟಕದಲ್ಲಿ ಬರಪೀಡಿತ ಪ್ರದೇಶಗಳ ಪಟ್ಟಿಗೆ 53 ತಾಲ್ಲೂಕು ಸೇರ್ಪಡೆ; ಇದೀಗ ಸಂಖ್ಯೆ 177ಕ್ಕೆ ಏರಿಕೆ
ಬೆಂಗಳೂರು: ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ 53 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲ್ಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಹಂತ ಹಂತವಾಗಿ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಸಾಮಾಜಿಕ ಮಾಧ್ಯಮ ‘X’ನಲ್ಲಿ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 101 ಹಾಗೂ ಎರಡನೇ ಹಂತದಲ್ಲಿ 23 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಮೂರನೇ ಹಂತದಲ್ಲಿ ಮತ್ತೆ 53 ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಇವುಗಳಲ್ಲಿ 51 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿದ್ದು, ಎರಡು ತಾಲ್ಲೂಕುಗಳು ಸಾಧಾರಣ ಬರಪೀಡಿತ ಎಂದು ಸಚಿವರು ತಿಳಿಸಿದ್ದಾರೆ.

ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಮುಂದಿನ ಹಂತದ ಪರಿಶೀಲನೆಯನ್ನೂ ಕೈಗೊಳ್ಳಲಾಗುತ್ತಿದೆ.
11 ತಾಲ್ಲೂಕುಗಳಿಗೆ ಗ್ರೌಂಡ್ ಟ್ರೂಥಿಂಗ್
ನಾಲ್ಕನೇ ಹಂತದಲ್ಲಿ 7 ಜಿಲ್ಲೆಗಳ 11 ತಾಲ್ಲೂಕುಗಳು ‘Step-3: Ground Truthing’ಗೆ ಅರ್ಹತೆ ಪಡೆದಿವೆ. ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಹಾಗೂ ನಿಖರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.
ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದೆ. ಅಗತ್ಯ ಕಂಡುಬಂದರೆ ಮುಂದಿನ ಹಂತದಲ್ಲಿ ಇನ್ನಷ್ಟು ತಾಲ್ಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗೆ ಸೇರಿಸಲಾಗುವುದು.
ಬೆಳೆ ಹಾನಿಯ ನೈಜ ಚಿತ್ರಣದ ಆಧಾರದ ಮೇಲೆ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.