ಅಮೆರಿಕದ ವರ್ಜೀನಿಯಾ ಕ್ಷೇತ್ರದಿಂದ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ ಮರು ಆಯ್ಕೆ
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿ ಸುಹಾಸ್ ಸುಬ್ರಮಣ್ಯಂ ಅವರು ವರ್ಜೀನಿಯಾದ 10ನೇ ಕಾಂಗ್ರೆಸ್ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ. ತಮಿಳುನಾಡು ಮೂಲದ ವೈದ್ಯ ದಂಪತಿಯ ಪುತ್ರರಾಗಿರುವ ಸುಹಾಸ್, ತಮ್ಮ ಗೆಲುವಿನ ಸಂತಸವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
“ಚುನಾವಣೆ ಮುಗಿದಿದೆ, ಆದರೆ ಜನರಿಗಾಗಿ ಕೆಲಸ ಈಗಷ್ಟೇ ಆರಂಭವಾಗಿದೆ” ಎಂದು ಅವರು ತಿಳಿಸಿದ್ದಾರೆ. ಅವರ ತಾಯಿ ಬೆಂಗಳೂರಿನವರಾಗಿದ್ದು, ತಂದೆ ಚೆನ್ನೈ ಮತ್ತು ಸೆಕಂದರಾಬಾದ್‌ನಲ್ಲಿ ಬೆಳೆದವರು. 1986ರಲ್ಲಿ ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ಜನಿಸಿದ ಸುಹಾಸ್‌ಗೆ ಭಾರತದಲ್ಲಿ ಕುಟುಂಬದ ನಂಟಿದೆ.

2019ರಲ್ಲಿ ವರ್ಜೀನಿಯಾ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್, ದಕ್ಷಿಣ ಏಷ್ಯನ್ ಮತ್ತು ಹಿಂದೂ ಎಂಬ ಹೆಗ್ಗಳಿಕೆ ಅವರದು. 2024ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾಗಿದ್ದರು.
ಎಚ್-1ಬಿ ವೀಸಾ ನೀತಿ ಮತ್ತು ಭಾರತದ ಮೇಲಿನ ಅಮೆರಿಕದ ಸುಂಕ ಕ್ರಮಗಳನ್ನು ಅವರು ಟೀಕಿಸಿದ್ದರು. ಡೇಟಾ ಕೇಂದ್ರಗಳ ನಿಯಂತ್ರಣಕ್ಕೆ ಸಂಬಂಧಿಸಿದ ಮಸೂದೆಯನ್ನೂ ಮಂಡಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ವರ್ಜೀನಿಯಾದಲ್ಲಿ ನೆಲೆಸಿದ್ದಾರೆ.