ಬುಸಾನ್‌ನಲ್ಲಿ ದಕ್ಷಿಣ ಕೊರಿಯಾ ನೌಕಾಪಡೆಯೊಂದಿಗೆ ಐಎನ್‌ಎಸ್ ಸಹ್ಯಾದ್ರಿ ಜಂಟಿ ಸಮರಾಭ್ಯಾಸ
ಬುಸಾನ್: ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸಹ್ಯಾದ್ರಿ, ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಕೊರಿಯಾ ಗಣರಾಜ್ಯದ ನೌಕಾಪಡೆಯೊಂದಿಗೆ ನಡೆಸಿದ ದ್ವಿಪಕ್ಷೀಯ ನೌಕಾ ಸಮರಾಭ್ಯಾಸವನ್ನು ಅಕ್ಟೋಬರ್ 29ರಂದು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಕಸರತ್ತು ಬಂದರು ಮತ್ತು ಸಮುದ್ರ ಹಂತಗಳನ್ನು ಒಳಗೊಂಡಿತ್ತು. ಬಂದರು ಹಂತದಲ್ಲಿ ಎರಡೂ ದೇಶಗಳ ನೌಕಾಪಡೆ ಸಿಬ್ಬಂದಿ ವೃತ್ತಿಪರ ಚರ್ಚೆ, ಹಡಗುಗಳ ಪರಸ್ಪರ ಭೇಟಿ, ಕಾರ್ಯಾಚರಣೆ ಮಾಹಿತಿ ವಿನಿಮಯ ಹಾಗೂ ತಜ್ಞರ ಸಂವಾದದಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳೂ ನಡೆದವು.

ಸಮುದ್ರ ಹಂತದಲ್ಲಿ ಐಎನ್‌ಎಸ್ ಸಹ್ಯಾದ್ರಿ ಮತ್ತು ದಕ್ಷಿಣ ಕೊರಿಯಾದ ಯುದ್ಧನೌಕೆ ಆರ್‌ಒಕೆಎಸ್ ಮುನ್ಮು ದಿ ಗ್ರೇಟ್ ಜಂಟಿ ಸಂಚರಣೆ, ಹೆಲಿಕಾಪ್ಟರ್ ಕಾರ್ಯಾಚರಣೆ ಹಾಗೂ ಕಡಲ ಕವಾಯತು ನಡೆಸಿದವು.
ಈ ಅಭ್ಯಾಸದಿಂದ ಎರಡೂ ನೌಕಾಪಡೆಗಳ ನಡುವಿನ ಕಾರ್ಯಾಚರಣೆಯ ಸಮನ್ವಯ ಮತ್ತು ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಲು ನೆರವಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಕಡಲ ಸಹಕಾರ, ಪರಸ್ಪರ ನಂಬಿಕೆ ಬಲಪಡಿಸುವುದರ ಜತೆಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆ ಕಾಪಾಡುವ ಪ್ರಯತ್ನಕ್ಕೂ ಈ ಸಮರಾಭ್ಯಾಸ ಸಹಕಾರಿಯಾಗಿದೆ.