ಇಸ್ರೇಲ್: ರಾಷ್ಟ್ರೀಯ ಏಕತಾ ಸರ್ಕಾರಕ್ಕೆ ಸೇರುವಂತೆ ಐಸೆನ್‌ಕೋಟ್‌ಗೆ ನೆತನ್ಯಾಹು ಒತ್ತಾಯ
ಜೆರುಸಲೆಮ್: ಇಸ್ರೇಲ್‌ನ ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದ ಪುನರುಜ್ಜೀವನದ ಪ್ರಯತ್ನಗಳನ್ನು ತಡೆಯಲು ವಿಶಾಲ ರಾಜಕೀಯ ಮೈತ್ರಿ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಾಷ್ಟ್ರೀಯ ಏಕತಾ ಸರ್ಕಾರ ರಚನೆಯ ಪ್ರಯತ್ನಕ್ಕೆ ಸೇರುವಂತೆ ಐಡಿಎಫ್‌ನ ಮಾಜಿ ಮುಖ್ಯಸ್ಥ ಗಡಿ ಐಸೆನ್‌ಕೋಟ್ ಅವರನ್ನು ಒತ್ತಾಯಿಸಿದ್ದಾರೆ.
ಗುರುವಾರ ಐಸೆನ್‌ಕೋಟ್ ಅವರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ನೆತನ್ಯಾಹು, ಯಹೂದಿ ಜನರ ರಾಷ್ಟ್ರವಾಗಿ ಇಸ್ರೇಲ್‌ನ ಅಸ್ತಿತ್ವವನ್ನು ಬೆಂಬಲಿಸುವ ಎಲ್ಲ ಪಕ್ಷಗಳನ್ನು ಒಳಗೊಂಡ ಸರ್ಕಾರದ ಅಗತ್ಯವಿದೆ ಎಂಬ ತಮ್ಮ ನಂಬಿಕೆ ಮತ್ತಷ್ಟು ಬಲಗೊಂಡಿದೆ ಎಂದು ಹೇಳಿದ್ದಾರೆ.

ಇರಾನ್ ಯುರೇನಿಯಂ ಪುನರುತ್ಪಾದನೆ ಪ್ರಕ್ರಿಯೆಯನ್ನು ಪುನರಾರಂಭಿಸಲು ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ನೆತನ್ಯಾಹು ಆರೋಪಿಸಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸುವಲ್ಲಿ ಯಶಸ್ವಿಯಾದರೆ ಇಸ್ರೇಲ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂದು ಎಚ್ಚರಿಸಿದ್ದಾರೆ. ಇಸ್ರೇಲ್‌ನ ‘ಆಮ್ ಕೆಲವಿ’ ಮತ್ತು ‘ಶಾಗತ್ ಹಾ’ರಿ’ ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಅವರು, ಇರಾನ್ ಅಂತಹ ಸಾಮರ್ಥ್ಯ ಪಡೆಯುವುದನ್ನು ತಡೆಯಲು ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ಸೀಮಿತ ರಾಜಕೀಯ ಬೆಂಬಲ ಹೊಂದಿರುವ ಸರ್ಕಾರದಿಂದ ದೇಶದ ಭದ್ರತಾ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ವಾದಿಸಿರುವ ನೆತನ್ಯಾಹು, ರಾಷ್ಟ್ರೀಯ ಏಕತಾ ಸರ್ಕಾರವು ಇಸ್ರೇಲ್‌ನ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ರಾಜಕೀಯ ಸಮನ್ವಯಕ್ಕೂ ನೆರವಾಗಲಿದೆ ಎಂದಿದ್ದಾರೆ.
ಯಾವುದೇ ಪೂರ್ವ ಷರತ್ತುಗಳಿಲ್ಲದೆ ಮಾತುಕತೆಗೆ ಮುಂದಾಗಬೇಕು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಷ್ಟ್ರೀಯ ಭದ್ರತೆ ಮತ್ತು ದೇಶದ ಭವಿಷ್ಯದ ಕುರಿತು ಒಮ್ಮತ ರೂಪಿಸಬೇಕು ಎಂದು ಅವರು ಐಸೆನ್‌ಕೋಟ್ ಅವರನ್ನು ಒತ್ತಾಯಿಸಿದ್ದಾರೆ. ಹರೇದಿ ಸಮುದಾಯದ ಪ್ರತಿನಿಧಿಗಳೊಂದಿಗೆ ಚರ್ಚಿಸುವ ಮೂಲಕ ಕಡ್ಡಾಯ ಸೇನಾ ಸೇವೆಯ ಸಮಸ್ಯೆಯನ್ನು ಬಗೆಹರಿಸಬಹುದು ಎಂದೂ ತಿಳಿಸಿದ್ದಾರೆ.
ಪ್ರಸ್ತಾವಿತ ಮೈತ್ರಿಯನ್ನು ‘ಭರವಸೆಯ ಸರ್ಕಾರ’ ಎಂದು ಬಣ್ಣಿಸಿರುವ ನೆತನ್ಯಾಹು, ರಾಷ್ಟ್ರೀಯ ಸಾಮರಸ್ಯಕ್ಕಾಗಿ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಬೇಡಿಕೆಗಳಿಗೆ ಈ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.