ಮೈಸೂರು ದಸರಾ ಅಂಗಳದಲ್ಲಿ ಕರಾವಳಿಯ ಕಂಬಳ ವೈಭವ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಕರಾವಳಿಯ ಜನಪ್ರಿಯ ಕ್ರೀಡೆ ‘ಕಂಬಳ’ ಗಮನಸೆಳೆದಿದೆ. ಈ ಕಂಬಳಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ಹಾಗೂ ವೀರ ಗಂಗಾಧರ ಅಜ್ಜಯ್ಯ ಅವರ ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಅವರು, ಕರಾವಳಿಯ ಮಣ್ಣಿನ ಸೊಗಡು, ಜನಪದ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ತಲೆಮಾರುಗಳಿಂದ ಬೆಳೆದುಬಂದ ಸಂಪ್ರದಾಯಗಳ ಸೊಬಗು ಕಂಬಳದಲ್ಲಿ ಅನನ್ಯವಾಗಿ ಮೇಳೈಸಿವೆ ಎಂದು ಹೇಳಿದರು.
ನಾಡಿನ ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ ಮತ್ತು ಜನಪದ ಪರಂಪರೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಇಂತಹ ಕಾರ್ಯಕ್ರಮಗಳು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರು ದಸರಾ ವೇದಿಕೆಯಲ್ಲಿ ಕಂಬಳ ಆಯೋಜಿಸಿರುವುದು ಕರಾವಳಿಯ ಸಾಂಪ್ರದಾಯಿಕ ಕ್ರೀಡೆಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಿದಂತಾಗಿದೆ. ಇದರಿಂದ ಕರಾವಳಿ ಭಾಗದ ಜನಪದ ಸಂಸ್ಕೃತಿ ಮತ್ತು ಕ್ರೀಡಾ ಪರಂಪರೆಯ ಪರಿಚಯ ಹೆಚ್ಚಿನ ಜನರಿಗೆ ದೊರೆಯಲಿದೆ.
ಕಾರ್ಯಕ್ರಮದಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ, ಎನ್. ಚಲುವರಾಯಸ್ವಾಮಿ, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಅಶೋಕ್ ರೈ, ಮಾಜಿ ಶಾಸಕ ನರೇಂದ್ರ ಬಾಬು, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಂದ್ರ ಹಾಗೂ ಬೋವಿ ನಿಗಮದ ಅಧ್ಯಕ್ಷ ರಾಮಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.