ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಿರುವುದು ಆತಂಕಕಾರಿ; ಡಾ. ರವಿ ಸಿ.ಟಿ
ಚಿಕ್ಕಮಗಳೂರು: ಕನ್ನಡ ಭಾಷೆಯ ಉಳಿವು ಅದರ ನಿರಂತರ ಬಳಕೆಯಲ್ಲಿದೆ. ಸಾಹಿತ್ಯ ಪರಂಪರೆಯ ಬಗ್ಗೆ ಹೆಮ್ಮೆಪಡುವುದರ ಜೊತೆಗೆ ದೈನಂದಿನ ಬದುಕಿನಲ್ಲಿ ಕನ್ನಡ ಬಳಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದ್ದಾರೆ.
ನಗರದ ಮಲ್ಲಂದೂರು ರಸ್ತೆಯ ಭಗತ್ ಸಿಂಗ್ ಆಟೋ ನಿಲ್ದಾಣದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳು ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ವಚನ, ದಾಸ, ಜನಪದ ಸಾಹಿತ್ಯ, ಗಾದೆಗಳು ಮತ್ತು ನುಡಿಗಟ್ಟುಗಳು ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ ಎಂದರು.
ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಿರುವುದು ಕಳವಳಕಾರಿ. ಕನ್ನಡಿಗರೇ ಹೆಚ್ಚಿರುವ ಗ್ರಾಮಗಳಲ್ಲಿಯೂ ಮಕ್ಕಳಿಲ್ಲ ಎಂಬ ಕಾರಣ ನೀಡಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ವಾಸ್ತವದಲ್ಲಿ ಮಕ್ಕಳಿದ್ದರೂ ಕನ್ನಡ ಶಾಲೆಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡದ ಮೇಲಿನ ಅಭಿಮಾನದ ಕೊರತೆಯೇ ಭಾಷೆಯ ಅವನತಿಗೆ ಪ್ರಮುಖ ಕಾರಣ. ಇಂದಿನ ಪೀಳಿಗೆಯವರು ಬೆರೆಕೆ ಕನ್ನಡ ಮಾತನಾಡುತ್ತಿದ್ದು, ಮುಂದಿನ ಪೀಳಿಗೆ ಕನ್ನಡವನ್ನೇ ಮರೆಯುವ ಆತಂಕವಿದೆ ಎಂದರು.
ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದಕ್ಕೆ ವಿರೋಧವಿಲ್ಲ. ಆದರೆ, ಅವುಗಳ ಕಲಿಕೆಯ ಭರದಲ್ಲಿ ಮಾತೃಭಾಷೆಯನ್ನು ಮರೆಯಬಾರದು. ಬೇರೆ ಭಾಷೆಗಳನ್ನು ಎಷ್ಟೇ ಚೆನ್ನಾಗಿ ಕಲಿತರೂ ಅವು ತಾಯಿಭಾಷೆಯ ಸ್ಥಾನ ತುಂಬಲು ಸಾಧ್ಯವಿಲ್ಲ. ಕನ್ನಡದ ಮೇಲಿನ ಅಭಿಮಾನ ಬೆಳೆಸಿಕೊಂಡು ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಕರೆ ನೀಡಿದರು.