ಸಂಪುಟ ವಿಸ್ತಣೆ ಮತ್ತೆ ಮುಂದಕ್ಕೆ; ಅಂತೂ-ಇಂತೂ ಇವರೇ ಸಚಿವರಾಗುವ ಸಾಧ್ಯತೆ ಹೆಚ್ಚು
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಆರಂಭದಲ್ಲಿ ಬುಧವಾರ ನೂತನ ಸಚಿವರ ಪ್ರಮಾಣವಚನ ನಡೆಯುವ ನಿರೀಕ್ಷೆ ಇದ್ದರೂ, ದೆಹಲಿಯಲ್ಲಿ ನೀಟ್ ಪ್ರತಿಭಟನೆ ಹಾಗೂ ಸಂಸತ್ ಅಧಿವೇಶನದ ಆರಂಭದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕ್ರಿಯೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಕರ್ನಾಟಕ ಭವನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಧನದ ಬೆಳವಣಿಗೆಯಿಂದ ಹೈಕಮಾಂಡ್ ನಾಯಕರು ಇತರ ವಿಚಾರಗಳಲ್ಲಿ ನಿರತರಾಗಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಸಂಪುಟ ವಿಸ್ತರಣೆಯನ್ನು ಮುಂದೂಡಲು ಇಷ್ಟವಿಲ್ಲದಿದ್ದರೂ, ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಖಾಲಿ ಇರುವ ಸಚಿವ ಸ್ಥಾನಗಳನ್ನು ಸಾಧ್ಯವಾದಷ್ಟು ಭರ್ತಿ ಮಾಡುವ ಉದ್ದೇಶವಿದ್ದು, ಹಿರಿಯರು ಹಾಗೂ ಕಿರಿಯರಿಗೆ ಸಮಾನ ಅವಕಾಶ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಸಂಪುಟ ಸೇರ್ಪಡೆ ಕುರಿತಂತೆ ವಿಜಯಾನಂದ ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಅಶೋಕ್ ಪಟ್ಟಣ, ಲಕ್ಷ್ಮಣ ಸವದಿ, ಹಂಪನಗೌಡ ಬಾದರ್ಲಿ, ಯಶವಂತ್ ರಾಯಗೌಡ, ಅಪ್ಪಾಜಿ ನಾಡಗೌಡ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರುಗಳು ಚರ್ಚೆಯಲ್ಲಿವೆ. ಶಿವಲಿಂಗೇಗೌಡ, ಮಾಗಡಿ ಬಾಲಕೃಷ್ಣ, ಶರತ್ ಬಚ್ಚೇಗೌಡ, ಪ್ರಿಯಾ ಕೃಷ್ಣ ಹಾಗೂ ಗುಬ್ಬಿ ಶ್ರೀನಿವಾಸ್ (ವಾಸು) ಅವರ ಹೆಸರೂ ಪರಿಗಣನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಜಮೀರ್ ಅಹ್ಮದ್ ಖಾನ್ ಅವರಿಗೆ ಮತ್ತೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಲೀಂ ಅಹ್ಮದ್, ತನ್ವೀರ್ ಸೇಠ್, ರಿಜ್ವಾನ್ ಅರ್ಷದ್, ಖನೀಜ್ ಫಾತಿಮಾ ಅವರ ಹೆಸರುಗಳೂ ಚರ್ಚೆಯಲ್ಲಿದ್ದು, ಮಹಿಳಾ ಕೋಟಾದಡಿ ಎಂಎಲ್‌ಸಿ ಆರತಿ ಕೃಷ್ಣ ಹಾಗೂ ಉಮಾಶ್ರೀ ಅವರಿಗೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.