ಬೆಂಗಳೂರಿನಲ್ಲಿ ಅಕ್ರಮ ಸಿಮ್ ಬಾಕ್ಸ್ ಜಾಲ ಭೇದಿಸಿದ ಪೊಲೀಸರು; ಮಹಾರಾಷ್ಟ್ರದಲ್ಲಿ ನಾಲ್ವರು ಬಂಧನ
ಬೆಂಗಳೂರು: ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲವನ್ನು ಕರ್ನಾಟಕ ಪೊಲೀಸರ ಸೈಬರ್ ಕಮಾಂಡ್ ಘಟಕ ಭೇದಿಸಿದ್ದು, ಮಹಾರಾಷ್ಟ್ರದ ತಿರೋಡಾದಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ದೂರಸಂಪರ್ಕ ಇಲಾಖೆಯ (DoT) ಸಹಯೋಗದಲ್ಲಿ ನಡೆಸಿದ ಸಂಘಟಿತ ಕಾರ್ಯಾಚರಣೆಯಲ್ಲಿ, ಒಟ್ಟು 320 ಸಿಮ್ ಸಂಪರ್ಕಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ 10 ಸಿಮ್ ಬಾಕ್ಸ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಿಂದ ತಪ್ಪಿಸಿಕೊಳ್ಳಲು ಈ ಜಾಲವು ಬದಲಾಗುವ ಇ-ಸಿಮ್ ಪ್ರೊಫೈಲ್‌ಗಳು, ಇತರ ವ್ಯಕ್ತಿಗಳ ಹೆಸರಿನಲ್ಲಿ ಬಾಡಿಗೆ ಪಡೆಯುವ ವಿಧಾನ ಹಾಗೂ ಐಎಂಇಐ ಸಂಖ್ಯೆಗಳ ತಿರುಚುವಿಕೆಯನ್ನು ಬಳಸಿಕೊಂಡಿತ್ತು ಎಂದು ಖರ್ಗೆ ಹೇಳಿದ್ದಾರೆ.

ತನಿಖೆಯನ್ನು ಕರ್ನಾಟಕದ ಗಡಿಯನ್ನು ಮೀರಿ ವಿಸ್ತರಿಸಿದ ಅಧಿಕಾರಿಗಳು, ಮಹಾರಾಷ್ಟ್ರದ ತಿರೋಡಾದಲ್ಲಿನ ಪೂರೈಕೆ ಸರಪಳಿಯ ಸಂಪರ್ಕಗಳನ್ನು ಪತ್ತೆಹಚ್ಚಿದ್ದಾರೆ. ಇದರ ಬೆನ್ನಲ್ಲೇ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಮೂಲಸೌಕರ್ಯವನ್ನು ದೇಶದಾದ್ಯಂತ ನಡೆಯುತ್ತಿದ್ದ ಆರ್ಥಿಕ ಸೈಬರ್ ವಂಚನೆಗಳಿಗೆ ಬಳಸಿರುವ ಶಂಕೆಯಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಣ ಸುಲಿಗೆ ಮಾಡುವ ಹಗರಣಗಳು ಹಾಗೂ ಲೈಂಗಿಕ ವಿಷಯಗಳನ್ನು ಮುಂದಿಟ್ಟುಕೊಂಡು ಬೆದರಿಸಿ ಹಣ ವಸೂಲಿ ಮಾಡುವ ಸೆಕ್ಸ್‌ಟಾರ್ಷನ್ ಪ್ರಕರಣಗಳಿಗೂ ಈ ಜಾಲದ ಸಂಪರ್ಕವಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸಿಮ್ ಬಾಕ್ಸ್ ಸಾಧನಗಳು ಹಲವು ಸಿಮ್ ಸಂಪರ್ಕಗಳು ಮತ್ತು ಇಂಟರ್ನೆಟ್ ಆಧಾರಿತ ವ್ಯವಸ್ಥೆಗಳ ಮೂಲಕ ಕರೆಗಳನ್ನು ರವಾನಿಸಲು ನೆರವಾಗುತ್ತವೆ. ಇಂತಹ ಸಾಧನಗಳನ್ನು ದುರುಪಯೋಗಪಡಿಸಿಕೊಂಡರೆ ಕರೆಗಳ ಮೂಲವನ್ನು ಮರೆಮಾಚಿ ಸೈಬರ್ ವಂಚನೆಗಳನ್ನು ನಡೆಸಲು ಅವಕಾಶವಾಗಬಹುದು.
ಸೈಬರ್ ಅಪರಾಧಗಳ ವಿರುದ್ಧ ನಿರಂತರ ನಿಗಾ ಇರಿಸುವುದರ ಜತೆಗೆ, ವ್ಯಾಪಕ ಜಾಲಗಳನ್ನು ಪತ್ತೆಹಚ್ಚಲು ವಿವಿಧ ತನಿಖಾ ಸಂಸ್ಥೆಗಳ ನಡುವಿನ ಸಮನ್ವಯವನ್ನು ಬಲಪಡಿಸಲಾಗುವುದು. ಸೈಬರ್ ಅಪರಾಧಗಳಿಂದ ನಾಗರಿಕರನ್ನು ರಕ್ಷಿಸಲು ಕರ್ನಾಟಕ ಪೊಲೀಸರು ಬದ್ಧರಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.