ಕಸ್ತೂರಿ ರಂಗನ್ ವರದಿ ವಿಚಾರ: ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರಕ್ಕೆ ತೆರಳಿ ರೈತರ ಧ್ವನಿ ಮುಟ್ಟಿಸುತ್ತೇವೆ: ಡಿಕೆಶಿ
ಹಾಸನ: ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯದ ನಿಲುವು ತಿಳಿಸುವ ಮುನ್ನ ವಿಧಾನಮಂಡಲದಲ್ಲಿ ಚರ್ಚಿಸಿ, ಶಾಸಕರು ಹಾಗೂ ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ರೈತರ ಅಭಿಪ್ರಾಯವನ್ನು ಮುಟ್ಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಕಲೇಶಪುರದ ಎಪಿಎಂಸಿ ಯಾರ್ಡ್ ಆವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಂವಾದದಲ್ಲಿ ಮಾತನಾಡಿದ ಅವರು, ಸೆ.27ರೊಳಗೆ ವರದಿ ಕುರಿತು ಉತ್ತರ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲು ಸರ್ಕಾರವೇ ಅವರ ಮನೆ ಬಾಗಿಲಿಗೆ ಬಂದಿದೆ ಎಂದರು.
ವರದಿ ಕುರಿತು ಅಧಿವೇಶನದಲ್ಲಿ ಚರ್ಚೆ
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಅಕ್ಕಪಕ್ಕದ ರಾಜ್ಯಗಳು ಕೆಲವು ಬದಲಾವಣೆಗಳನ್ನು ಮಾಡಿರುವ ಹಿನ್ನೆಲೆಯಲ್ಲಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು ಭೌತಿಕ ಸಮೀಕ್ಷೆ, ಗ್ರಾಮಸಭೆ, ಸೂಕ್ಷ್ಮ ಪರಿಸರ ವಲಯ, ವಲಯ ನಿರ್ವಹಣಾ ಯೋಜನೆ ಹಾಗೂ ಭೂಮಿ ಹಕ್ಕು ಸೇರಿದಂತೆ ಹಲವು ಅಂಶಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
“ನಿಮ್ಮ ಪರವಾಗಿ, ನಿಮ್ಮ ಧ್ವನಿಯಾಗಿ ನಿಲ್ಲಲು ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ” ಎಂದು ಅವರು ಹೇಳಿದರು.

ರೈತರಿಗೆ ಕಿರುಕುಳ ನೀಡದಂತೆ ಸೂಚನೆ
ಅರಣ್ಯ ಅಧಿಕಾರಿಗಳು ರೈತರಿಗೆ ಅನಗತ್ಯ ನೋಟಿಸ್ ನೀಡಿ ಕಿರುಕುಳ ನೀಡಬಾರದು. ಜನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಅಕ್ರಮ-ಸಕ್ರಮ, ಬಗರ್ ಹುಕ್ಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಅರಣ್ಯ ಹಕ್ಕು ಕಾಯ್ದೆಯಲ್ಲಿನ ಹಕ್ಕು ಮಿತಿಗೆ ಸಂಬಂಧಿಸಿದಂತೆ ಬದಲಾವಣೆ ತರಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ನ.1ರೊಳಗೆ ಅಕ್ರಮ ಬಂದೂಕು ಒಪ್ಪಿಸಲು ಸೂಚನೆ
ತಲೆಮಾರುಗಳಿಂದ ರೈತರು ತಮ್ಮ ಭೂಮಿಯನ್ನು ಕಾಪಾಡಿಕೊಂಡು ಬಂದಿದ್ದು, ಹೊಸದಾಗಿ ಯಾರೂ ಒತ್ತುವರಿ ಮಾಡಬಾರದು ಎಂದು ಶಿವಕುಮಾರ್ ಹೇಳಿದರು.
ಪರವಾನಗಿ ಇಲ್ಲದೆ ಅಕ್ರಮವಾಗಿ ಬಂದೂಕು ಹೊಂದಿರುವವರು ನವೆಂಬರ್ 1ರೊಳಗೆ ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಸೂಚಿಸಿದರು. ಅಗತ್ಯವಿದ್ದಲ್ಲಿ ನಿಯಮಾನುಸಾರ ಪರವಾನಗಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಗಡುವಿನ ಬಳಿಕವೂ ಅಕ್ರಮ ಬಂದೂಕು ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ತಮ್ಮ ಪಕ್ಷದ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿಯೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಶಿವಕುಮಾರ್ ಹೇಳಿದರು.