Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ದೀಪಾವಳಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

By ANU News
October 31, 2026 2 Min Read
Comments Off on ದೀಪಾವಳಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 2,600 ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.

ನವೆಂಬರ್ 8ರಂದು ನರಕ ಚತುರ್ದಶಿ, ನವೆಂಬರ್ 10ರಂದು ಬಲಿಪಾಡ್ಯಮಿ ಹಾಗೂ ನವೆಂಬರ್ 7 ಮತ್ತು 8ರಂದು ವಾರಾಂತ್ಯ ರಜೆ ಇರುವ ಹಿನ್ನೆಲೆಯಲ್ಲಿ, ನವೆಂಬರ್ 6ರಿಂದ 8ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳ ಪ್ರಮುಖ ನಗರಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ನವೆಂಬರ್ 10 ಮತ್ತು 11ರಂದು ವಿವಿಧ ಸ್ಥಳಗಳಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ನಿಗಮ ತಿಳಿಸಿದೆ.

ಯಾವ ನಿಲ್ದಾಣದಿಂದ ಯಾವ ಊರಿಗೆ ಬಸ್?

ಕೆಂಪೇಗೌಡ ಬಸ್ ನಿಲ್ದಾಣದಿಂದ ಉಡುಪಿ, ಕುಂದಾಪುರ, ಮಂಗಳೂರು, ಪುತ್ತೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಬಳ್ಳಾರಿ, ಬೀದರ್, ರಾಯಚೂರು ಸೇರಿದಂತೆ ಹಲವು ಸ್ಥಳಗಳಿಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ಹೊರರಾಜ್ಯದ ನಗರಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗಗಳಿಗೆ ಬಸ್‌ಗಳು ಸಂಚರಿಸಲಿವೆ.

ತಮಿಳುನಾಡು ಮತ್ತು ಕೇರಳದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಹಾಗೂ ಕೋಯಿಕೋಡ್ ಮುಂತಾದ ನಗರಗಳಿಗೆ ತೆರಳುವ ಪ್ರತಿಷ್ಠಿತ ಬಸ್‌ಗಳು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡಲಿವೆ.

ಹಲವು ಪಿಕಪ್ ಪಾಯಿಂಟ್‌ಗಳ ವ್ಯವಸ್ಥೆ

ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ ಹೆಚ್ಚುವರಿ ಬಸ್‌ಗಳು ಶಾಂತಿನಗರ, ವಿಜಯನಗರ, ಯಶವಂತಪುರ, ಜಯನಗರ ಟಿಟಿಎಂಸಿ, ಮಲ್ಲೇಶ್ವರಂ 18ನೇ ಕ್ರಾಸ್, ಬಸವೇಶ್ವರನಗರದ ಶಾರದಾ ಕಾಲೋನಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಮತ್ತು ಟಿನ್ ಫ್ಯಾಕ್ಟರಿ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲಿವೆ.

ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ಟಿಕೆಟ್‌ನಲ್ಲಿ ನಮೂದಿಸಿರುವ ಬಸ್ ನಿಲ್ದಾಣ ಅಥವಾ ಪಿಕಪ್ ಪಾಯಿಂಟ್‌ ವಿವರವನ್ನು ಪರಿಶೀಲಿಸಬೇಕು ಎಂದು ನಿಗಮ ಮನವಿ ಮಾಡಿದೆ.

ಟಿಕೆಟ್ ಕಾಯ್ದಿರಿಸಲು ರಿಯಾಯಿತಿ

ಪ್ರಯಾಣಿಕರು ಹೆಚ್ಚುವರಿ ಬಸ್‌ಗಳಿಗೆ ಮುಂಗಡವಾಗಿ ಆಸನ ಕಾಯ್ದಿರಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಟಿಕೆಟ್ ಕಾಯ್ದಿರಿಸಿದರೆ ಶೇ. 5ರಷ್ಟು ರಿಯಾಯಿತಿ ದೊರೆಯಲಿದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ವಾಪಸ್ ಪ್ರಯಾಣದ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಲು www.ksrtc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೇರಿಯ ಪ್ರಮುಖ ನಗರಗಳಲ್ಲಿರುವ ಕೆಎಸ್‌ಆರ್‌ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳಲ್ಲಿಯೂ ಸೌಲಭ್ಯ ಲಭ್ಯವಿದೆ.

ವಿಶೇಷ ಬಸ್‌ಗಳ ವೇಳಾಪಟ್ಟಿ, ಹೊರಡುವ ಸ್ಥಳ ಮತ್ತು ಇತರ ವಿವರಗಳನ್ನು ನಿಗಮದ ವೆಬ್‌ಸೈಟ್ ಹಾಗೂ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Author

ANU News

Follow Me
Other Articles
Previous

Qatar Kannadigas to Celebrate 71st Kannada Rajyotsava with ‘Karunada Vaibhava-2026’

Next

KSRTC rolls out 2,600 extra buses for Diwali; special services from Nov 6 to 8

Recent Posts

  • Centre announces Census 2027 schedule; four poll-bound states get exemption
  • 2027ರ ಜನಗಣತಿಗೆ ಮುಹೂರ್ತ ಫಿಕ್ಸ್: ಜನವರಿ 25ರಿಂದ ಮನೆ ಮನೆ ಸಮೀಕ್ಷೆ ಆರಂಭ!
  • KSRTC rolls out 2,600 extra buses for Diwali; special services from Nov 6 to 8
  • ದೀಪಾವಳಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
  • Qatar Kannadigas to Celebrate 71st Kannada Rajyotsava with ‘Karunada Vaibhava-2026’
Copyright 2026 — ANU News. All rights reserved. Blogsy WordPress Theme