Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವೈವಿಧ್ಯ

ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

By ANU News
August 30, 2026 2 Min Read
0

ಬೆಂಗಳೂರು: ಪೊಲೀಸ್ ಸಮವಸ್ತ್ರ ಎಂದರೆ ಕಠಿಣತೆ, ಶಿಸ್ತು ಮತ್ತು ಅಧಿಕಾರದ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಯ ನಡುವೆ, ಅದೇ ಸಮವಸ್ತ್ರದೊಳಗೆ ಆಳವಾದ ಮಾನವೀಯ ಹೃದಯವೊಂದನ್ನು ಕಾಪಾಡಿಕೊಂಡು ಸೇವೆ ಸಲ್ಲಿಸಿದ ಅಪರೂಪದ ಅಧಿಕಾರಿಗಳಲ್ಲಿ ಡಾ. ಬಿ.ಆರ್. ರವಿಕಾಂತೇಗೌಡ ಅವರೂ ಒಬ್ಬರು.

ಮಂಡ್ಯದಲ್ಲಿ ಹುಟ್ಟಿ ಬೆಳೆದ ಅವರು 1997ರಲ್ಲಿ ಪೊಲೀಸ್ ಸೇವೆಯನ್ನು ಆಯ್ಕೆ ಮಾಡಿಕೊಂಡರು. ಕೆಎಎಸ್‌ ಅಧಿಕಾರಿಯಾಗುವ ಅವಕಾಶವಿದ್ದರೂ, ಸಮಾಜಕ್ಕೆ ನೇರವಾಗಿ ಸೇವೆ ಸಲ್ಲಿಸುವ ಆಶಯದಿಂದ ಡಿವೈಎಸ್ಪಿ ಹುದ್ದೆಯನ್ನು ಸ್ವೀಕರಿಸಿದರು. ವೃತ್ತಿಜೀವನದ ವಿವಿಧ ಹಂತಗಳಲ್ಲಿ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಮಾನವೀಯತೆಯನ್ನು ಒಟ್ಟಿಗೆ ಕೊಂಡೊಯ್ದ ಅವರು, ಸೇವೆಯಲ್ಲಿದ್ದ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆದರು.

ದಶಕಗಳ ಹೆಂದೆ ರಾಜ್ಯದಲ್ಲಿ ಆಗಾಗ್ಗೆ ತಲ್ಲಣ ಸೃಷ್ಟಿಸುತ್ತಿದ್ದ ಹುಬ್ಬಳ್ಳಿ ಕಮರಿಪೇಟೆ ಅಕ್ರಮ ಸಾರಾಯಿ ದಂಧೆ ವಿರುದ್ಧದ ಕಾರ್ಯಾಚರಣೆ ಅವರ ವೃತ್ತಿಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗಲೂ ಪೊಲೀಸ್ ವ್ಯವಸ್ಥೆ ವಸಾಹತುಶಾಹಿ ಮನಸ್ಥಿತಿಯ ಹಿಡಿತದಿಂದ ಹೊರಬರಬೇಕೆಂಬ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡವರು.

ಪೊಲೀಸ್ ಇಲಾಖೆಯ ಕವಾಯತು ಮತ್ತು ಘೋಷಣೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನವೂ ಅವರ ಹೆಜ್ಜೆಗಳಲ್ಲಿ ಪ್ರಮುಖವಾದುದು. ಬ್ರಿಟಿಷ್ ಕಾಲದ ಪರಂಪರೆಯಿಂದ ಬಂದಿದ್ದ ಪೊಲೀಸ್ ಕವಾಯತು ಘೋಷಣೆಗಳಿಗೆ ಕನ್ನಡದ ಸ್ಪರ್ಶ ನೀಡುವ ಮೂಲಕ ನಾಡು–ನುಡಿಯೊಂದಿಗೆ ಇಲಾಖೆಯ ಸಂಬಂಧವನ್ನು ಗಟ್ಟಿಗೊಳಿಸಲು ಅವರು ಪ್ರಯತ್ನಿಸಿದರು.

ಆದರೆ ರವಿಕಾಂತೇಗೌಡರ ವ್ಯಕ್ತಿತ್ವದ ಮತ್ತೊಂದು ಮುಖ ಇನ್ನಷ್ಟು ಗಮನಾರ್ಹ. ನ್ಯಾಯ ಅರಸಿ ತಮ್ಮ ಬಳಿಗೆ ಬಂದವರನ್ನು ಕೇವಲ ಪ್ರಕರಣದ ಸಂಖ್ಯೆಯಾಗಿ ನೋಡದೆ, ಅವರ ನೋವು ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂಬ ನಿಲುವು ಅವರದಾಗಿತ್ತು. ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಅವರನ್ನು ‘ಮಾತೃ ಹೃದಯಿ’ ಅಧಿಕಾರಿ ಎಂದು ನೆನಪಿಸಿಕೊಳ್ಳುತ್ತಾರೆ.

ಈ ವಿಚಾರವನ್ನು ನೆನಪಿಸಿಕೊಂಡು ರಾಜ್ಯದ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರು ಅವರು ಬರೆದುಕೊಂಡಿರುವ ಒಂದಷ್ಟು ಸಾಲುಗಳು ಗಮನಸೆಳೆದಿವೆ.

‘ಒಲವೇ ನಮ್ಮ ಬದುಕು’ ಎಂಬ ಡಾ.ರವೀಕಾಂತೇ ಗೌಡರ ಸ್ನೇಹ ಬಳಗದ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಗೋಪಾಲ ಹೊಸೂರು, ‘ಸಮವಸ್ತ್ರದ ಹಿಂದೆ ಆಳವಾದ ಮಾನವೀಯ ವ್ಯಕ್ತಿ’ ಎಂದು ಗೌಡರನ್ನು ಬಣ್ಣಿಸಿದ್ದಾರೆ.

ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ ಹೊಸೂರು ಅವರು ರವಿಕಾಂತೇಗೌಡರ ನಿವೃತ್ತಿಯ ಸಂದರ್ಭದಲ್ಲಿ ಬರೆದಿರುವ ಬರಹದಲ್ಲೂ ಇದೇ ಅಂಶ ಎದ್ದು ಕಾಣುತ್ತದೆ. “ಸಮವಸ್ತ್ರದ ಹಿಂದೆ ಆಳವಾದ ಮಾನವೀಯ ವ್ಯಕ್ತಿ ಇದ್ದಾರೆ” ಎಂದು ಅವರು ಬಣ್ಣಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರ ಅಪರಾಧ ವಿಭಾಗದ ಡಿಸಿಪಿಯಾಗಿ ರವಿಕಾಂತೇಗೌಡರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿರುವ ಹೊಸೂರು, ಒತ್ತಡದ ಸಂದರ್ಭದಲ್ಲಿ ಶಾಂತವಾಗಿ ನಿರ್ಧಾರ ಕೈಗೊಳ್ಳುವ ಅವರ ಸಾಮರ್ಥ್ಯವನ್ನು ಮೆಚ್ಚಿದ್ದಾರೆ. ದೃಢತೆಯೊಂದಿಗೆ ಸಹಾನುಭೂತಿಯನ್ನೂ ಕಾಪಾಡಿಕೊಂಡಿದ್ದೇ ಅವರ ವಿಶೇಷತೆ ಎಂದು ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯಷ್ಟೇ ಅಲ್ಲ, ಸಾಹಿತ್ಯಾಸಕ್ತರೂ ಆಗಿರುವ ರವಿಕಾಂತೇಗೌಡರು ಮೈಸೂರಿನ ಎನ್‌ಐಇಯಿಂದ ಪ್ರೊಡಕ್ಷನ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಯುವಿಸಿಇಯಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಸಾಹಿತ್ಯಾಸಕ್ತಿ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದವರೆಗೆ ಕರೆದೊಯ್ದಿದ್ದು, 2015ರಲ್ಲಿ ಡಿ.ಲಿಟ್ ಪದವಿ ಪಡೆದಿದ್ದಾರೆ.

ಪೊಲೀಸ್ ಸೇವೆ ಅವರ ವೃತ್ತಿಜೀವನದ ಒಂದು ಅಧ್ಯಾಯವಾಗಿದ್ದರೆ, ಸಮಾಜ ಮತ್ತು ಸಾಹಿತ್ಯದೊಂದಿಗಿನ ಒಡನಾಟ ಮುಂದಿನ ಅಧ್ಯಾಯವಾಗಲಿದೆ. ನಿವೃತ್ತಿಯ ಸಂದರ್ಭದಲ್ಲಿ ಗೋಪಾಲ ಹೊಸೂರು ಹೇಳಿರುವಂತೆ, ಅವರ ಜೀವನದ ಉತ್ತಮ ಅಧ್ಯಾಯಗಳು ಇನ್ನೂ ಬರೆಯಬೇಕಿವೆ.

ಸಮವಸ್ತ್ರವನ್ನು ಬಿಚ್ಚಿಡುವುದು ಸೇವೆಯ ಅಂತ್ಯವಾಗಬಹುದು; ಆದರೆ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಮನಸ್ಸಿಗೆ ಅದು ಅಂತ್ಯವಲ್ಲ. ರವಿಕಾಂತೇಗೌಡರ ಸೇವಾ ಪಯಣವೂ ಇದೇ ಸಂದೇಶವನ್ನು ಸಾರುತ್ತದೆ.

Author

ANU News

Follow Me
Other Articles
Previous

‘Service to needy irrespective of religion; RSS does not need propaganda’: Mohan Bhagwat

Next

A human heart behind the uniform: Ravikanthe Gowda begins a new chapter

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘What matters more, Hindu sentiments or vote bank?’ Ashoka attacks DK Shivakumar
    • ರಾಯರೆಡ್ಡಿ ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿಸಿ, ಇಲ್ಲವೇ ಸಚಿವ ಸ್ಥಾನದಿಂದ ವಜಾ ಮಾಡಿ- ಆರ್. ಅಶೋಕ್
    • ISIS-linked Al-Hind case: Accused Syed Fasiur Rehman convicted, fined ₹48,000
    • ಅಲ್-ಹಿಂದ್ ಐಸಿಸ್ ಸಂಚು ಪ್ರಕರಣ: ಸೈಯದ್ ಫಸಿಯುರ್ ರೆಹಮಾನ್‌ಗೆ 7 ವರ್ಷ ಜೈಲು
    • Chaturmasya celebrations: Datta Vijayananda Tirtha Swami attends 111th birth anniversary of Suttur seer
    Copyright 2026 — ANU News. All rights reserved. Blogsy WordPress Theme