ಮೈಸೂರು ದಸರಾ: ಆಕಾಶದಲ್ಲಿ 3,500 ಡ್ರೋನ್ಗಳ ತಂತ್ರಜ್ಞಾನದ ಚಿತ್ತಾರ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಬನ್ನಿಮಂಟಪದಲ್ಲಿ ಆಯೋಜಿಸಿದ್ದ ಭವ್ಯ ಡ್ರೋನ್ ಪ್ರದರ್ಶನ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಚಾವಿಸನಿ) ವತಿಯಿಂದ ಸತತ ಮೂರನೇ ವರ್ಷ ಆಯೋಜಿಸಿದ್ದ ಈ ಪ್ರದರ್ಶನಕ್ಕೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.
ಒಂದೇ ಸಮಯದಲ್ಲಿ 3,500 ಡ್ರೋನ್ಗಳು ಆಕಾಶದಲ್ಲಿ ಮೂಡಿಸಿದ ವೈವಿಧ್ಯಮಯ ಆಕೃತಿಗಳು ಪ್ರೇಕ್ಷಕರ ಗಮನ ಸೆಳೆದವು. ಯೋಧ, ಗ್ಯಾಲಕ್ಸಿ, ಚಿಟ್ಟೆ, ನವಿಲು, ಸಿಂಹ, ಭಾರತ್ ಜೋಡೋ, ಪ್ರಜಾ ಸೇವೆ, ಶ್ರೀಕೃಷ್ಣನ ಚಕ್ರ, ನಟರಾಜ, ನಂದಿ ಹಾಗೂ ಅಂಬಾರಿಯ ಚಿತ್ರಗಳು ಆಕಾಶದಲ್ಲಿ ಮೂಡಿಬಂದವು. ಎಲ್ಲರ ಆರಾಧ್ಯ ದೇವತೆ ತಾಯಿ ಚಾಮುಂಡೇಶ್ವರಿಯವರ ದಿವ್ಯರೂಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು.

ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಂಗಮದ ಮೂಲಕ ದಸರಾ ಮಹೋತ್ಸವದ ವೈಭವಕ್ಕೆ ಈ ಪ್ರದರ್ಶನ ಮತ್ತಷ್ಟು ಮೆರುಗು ನೀಡಿತು. ಆಕಾಶದಲ್ಲಿ ಮೂಡಿಬಂದ ಬೃಹತ್ ಚಿತ್ರಗಳನ್ನು ಕಂಡು ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್ ಮತ್ತು ರಮೇಶ್ ಬಂಡಿಸಿದ್ದೇಗೌಡ, ನಟಿ ಅನುಷಾ ರೈ, ಹ್ಯಾಂಡ್ಲೂಮ್ ಕಾರ್ಪೊರೇಷನ್ ಅಧ್ಯಕ್ಷ ನಾಗೇಂದ್ರ, ಚಾವಿಸನಿ ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ ಎಂ.ಎಸ್., ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಚಾವಿಸನಿಯ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.