Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕ

ರತ್ನಗಿರಿ ಶರನ್ನವರಾತ್ರಿ: ಸಜ್ಜನ ಶಕ್ತಿಯ ವಿಜಯವೇ ಸನಾತನ ಪರಂಪರೆಯ ಸಂದೇಶ ಎಂದ ಡಾ. ರವಿ ಸಿ.ಟಿ.

By ANU News
October 21, 2026 1 Min Read
0

ರತ್ನಗಿರಿ: ಅಸತ್ಯದ ವಿರುದ್ಧ ಸತ್ಯದ ಜಯ ಹಾಗೂ ದುಷ್ಟ ಶಕ್ತಿಗಳ ವಿರುದ್ಧ ಸಜ್ಜನ ಶಕ್ತಿಯ ವಿಜಯವೇ ವಿಜಯದಶಮಿ ಮತ್ತು ದುರ್ಗಾರಾಧನೆಯ ಮೂಲ ಸಂದೇಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದರು.

ರತ್ನಗಿರಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ವತಿಯಿಂದ 34ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ರತ್ನಗಿರಿ ಬೋರೆಯ ಕಾಳಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ್ದ ದುರ್ಗಾಹೋಮ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರೀರಾಮ ರಾವಣನ ವಿರುದ್ಧ ಸಾಧಿಸಿದ ಜಯ ಹಾಗೂ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ಕಥೆಗಳು ಸಜ್ಜನ ಶಕ್ತಿಯ ವಿಜಯವನ್ನು ಸಾರುತ್ತವೆ ಎಂದರು.

ಜಾತಿಗಳು ವಿಭಿನ್ನವಾಗಿದ್ದರೂ ಭಾರತೀಯ ಸಂಸ್ಕೃತಿ ಒಂದೇ ಆಗಿದೆ. ಸನಾತನ ಪರಂಪರೆಯಲ್ಲಿ ನೀತಿ ಮತ್ತು ನಡವಳಿಕೆಗೆ ಮಹತ್ವದ ಸ್ಥಾನವಿದೆ. ರಾವಣ ಬ್ರಾಹ್ಮಣನಾಗಿದ್ದರೂ ದುರ್ಮಾರ್ಗದಲ್ಲಿ ನಡೆದ ಕಾರಣ ದುಷ್ಟನೆಂದು ಗುರುತಿಸಲ್ಪಟ್ಟನು. ಇದರಿಂದ ವ್ಯಕ್ತಿಯ ಜಾತಿಗಿಂತ ಆತನ ನೀತಿ ಮುಖ್ಯ ಎಂಬ ಸಂದೇಶ ಸಿಗುತ್ತದೆ ಎಂದು ಹೇಳಿದರು. ದೇಶದ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪೋಷಕರು ಮಕ್ಕಳನ್ನು ಧೈರ್ಯವಂತರು, ಸಾಹಸಿಗಳು ಹಾಗೂ ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಕೆಟ್ಟ ಕೆಲಸ ಮಾಡಬಾರದು ಎಂಬುದರ ಜೊತೆಗೆ, ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರಬಾರದು ಎಂಬುದನ್ನೂ ಕಲಿಸಬೇಕು ಎಂದು ಕರೆ ನೀಡಿದರು.

ಭೂಮಿಯ ಒಡೆತನ ಮತ್ತು ಸಾಂಪ್ರದಾಯಿಕ ಕಸುಬುಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನು ಪ್ರಸ್ತಾಪಿಸಿದ ಅವರು, ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಅಳವಡಿಸಿಕೊಂಡರೂ ಪಾರಂಪರಿಕ ವೃತ್ತಿಗಳನ್ನು ಕೈಬಿಡಬಾರದು. ಹಿಂದಿನ ತಲೆಮಾರುಗಳಿಂದ ಬಂದ ಕಸುಬುಗಳು ಮುಂದಿನ ಪೀಳಿಗೆಯ ಬದುಕಿಗೂ ಆಧಾರವಾಗಬೇಕು ಎಂದು ಅಭಿಪ್ರಾಯಪಟ್ಟರು.

ಆಯುಧ ಪೂಜೆಯ ಮಹತ್ವ ವಿವರಿಸಿದ ಡಾ. ರವಿ, ದೇವತೆಗಳ ಅಭಯಹಸ್ತ ಸಜ್ಜನರ ರಕ್ಷಣೆಯ ಸಂಕೇತವಾದರೆ, ತ್ರಿಶೂಲ ಮತ್ತು ಖಡ್ಗದಂತಹ ಆಯುಧಗಳು ದುಷ್ಟ ಶಕ್ತಿಗಳ ವಿರುದ್ಧದ ಹೋರಾಟವನ್ನು ಪ್ರತಿನಿಧಿಸುತ್ತವೆ ಎಂದರು. ಆಯುಧ ಪೂಜೆಯ ನಿಜವಾದ ಆಶಯವನ್ನು ಅರಿತು, ಅದರ ಪರಂಪರೆ ಮತ್ತು ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಸನಾತನ ಪರಂಪರೆ, ಸಂಸ್ಕೃತಿ ಮತ್ತು ದೇಶದ ರಕ್ಷಣೆಗೆ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

Author

ANU News

Follow Me
Other Articles
Previous

ಭಾರತ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ: ಪಾಕಿಸ್ತಾನದ ಆರೋಪ

Next

Mysuru Dasara: CM Shivakumar Prays for State’s Prosperity

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Mysuru Dasara: CM Shivakumar Prays for State’s Prosperity
    • ರತ್ನಗಿರಿ ಶರನ್ನವರಾತ್ರಿ: ಸಜ್ಜನ ಶಕ್ತಿಯ ವಿಜಯವೇ ಸನಾತನ ಪರಂಪರೆಯ ಸಂದೇಶ ಎಂದ ಡಾ. ರವಿ ಸಿ.ಟಿ.
    • ಭಾರತ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ: ಪಾಕಿಸ್ತಾನದ ಆರೋಪ
    • Pakistan accuses India of fuelling terrorism, implementing ‘Doval doctrine’
    • NDA leaders drifting away as public discontent grows, says Mallikarjun Kharge
    Copyright 2026 — ANU News. All rights reserved. Blogsy WordPress Theme