ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ: ಕಂದಕಕ್ಕೆ ಉರುಳಿದ ವಾಹನ; 14 ಮಂದಿ ಸಾವು
ಕಠ್ಮಂಡು: ನೇಪಾಳದ ಮಕ್ವಾನ್ಪುರ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದಾರೆ.
ಕಠ್ಮಂಡುವಿನಿಂದ ಸರ್ಲಾಹಿ ಜಿಲ್ಲೆಗೆ ತೆರಳುತ್ತಿದ್ದ ವಿದ್ಯುತ್ ಪ್ರಯಾಣಿಕ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 500 ಮೀಟರ್ ಆಳದ ಬೆಟ್ಟದ ಇಳಿಜಾರಿಗೆ ಉರುಳಿದೆ.

ಛಠ್ ಹಬ್ಬ ಆಚರಿಸಲು ಸ್ವಗ್ರಾಮಕ್ಕೆ ತೆರಳುತ್ತಿದ್ದ ಪ್ರಯಾಣಿಕರು ವಾಹನದಲ್ಲಿದ್ದರು ಎನ್ನಲಾಗಿದೆ. ಮೃತರಲ್ಲಿ ಬಹುತೇಕರು ಸರ್ಲಾಹಿ ಜಿಲ್ಲೆಯ ಚಕ್ರಘಟ್ಟ ಗ್ರಾಮೀಣ ಪುರಸಭೆಯ ಸುಂದರ್ಪುರ ಪ್ರದೇಶದ ನಿವಾಸಿಗಳಾಗಿದ್ದಾರೆ. ಒಂದೇ ಕುಟುಂಬದ ಆರು ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.