ಗೌರಿಬಿದನೂರಿನಲ್ಲಿ ಆರ್‌ಎಸ್‌ಎಸ್ ನೂತನ ಕಾರ್ಯಾಲಯ ‘ರಜತಾರ್ಪಣ’ ಲೋಕಾರ್ಪಣೆ
ಗೌರಿಬಿದನೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪನಾ ದಿನ ಹಾಗೂ ವಿಜಯದಶಮಿಯ ಶುಭ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಸಂಘದ ನೂತನ ಕಾರ್ಯಾಲಯ ‘ರಜತಾರ್ಪಣ’ ಲೋಕಾರ್ಪಣೆಗೊಂಡಿತು.

ಕಳವಾರ ಓಂಕಾರ ಜ್ಯೋತಿ ಮಠದ ಪರಮಪೂಜ್ಯ ಕಾಳೀತನಯ ಡಾ. ಉಮಾಮಹೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಧ್ಯಕ್ಷತೆ ವಹಿಸಿದ್ದ ಕೆ.ವಿ. ಶಿವಕುಮಾರ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್ ಜಿ., ಜಿಲ್ಲಾ ಸಂಘಚಾಲಕ ವೇಣುಗೋಪಾಲ್ ಜಿ., ಸಂಸದ ಡಾ. ಸುಧಾಕರ್ ಸೇರಿದಂತೆ ಸಂಘದ ಹಿರಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಸಂತಸ ಹಂಚಿಕೊಂಡ ಸಂಸದ ಡಾ. ಸುಧಾಕರ್, “ತಾಯಿ ಭಾರತಿಯ ಸೇವೆಗೆ ಈ ಕಟ್ಟಡವನ್ನು ಸಮರ್ಪಿಸುವ ಭಾಗ್ಯ ನನ್ನದಾಯಿತು” ಎಂದು ಹೇಳಿದರು. ಅರ್ಪಣೆ ಮತ್ತು ನಿಸ್ವಾರ್ಥ ಸೇವೆಯ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಎಸ್ ಶತಮಾನ ಪೂರೈಸಿ ಎರಡನೇ ಶತಮಾನದತ್ತ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ ಗೌರಿಬಿದನೂರಿನಲ್ಲಿ ನೂತನ ಕಾರ್ಯಾಲಯ ಲೋಕಾರ್ಪಣೆಯಾಗಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ಕೆ ಉದಾರವಾಗಿ ಸಹಕಾರ ನೀಡಿದ ಉದ್ಯಮಿ ಕೆ.ವಿ. ಶಿವಕುಮಾರ್ ಅವರಿಗೆ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬ ಸ್ವಯಂಸೇವಕರಿಗೂ ಡಾ. ಸುಧಾಕರ್ ಕೃತಜ್ಞತೆ ಸಲ್ಲಿಸಿದರು.