ಅಯೋಧ್ಯೆ ಟ್ರಸ್ಟ್ ನಲ್ಲಿ ಬಿಜೆಪಿ ನಾಯಕರು ಇಲ್ಲ, ಆದರೂ ಕಾಂಗ್ರೆಸ್ ನಾಯಕರಿಂದ ಸುಳ್ಳು ಆರೋಪ; ಸಿ.ಟಿ.ರವಿ ಆಕ್ರೋಶ
ಬೆಂಗಳೂರು: ಅಯೋಧ್ಯೆ ರಾಮಮಂದಿರ ಹುಂಡಿ ಕಳವು ಸಂಬಂಧ ಕಾಂಗ್ರೆಸ್ ನವರು ಬಿಜೆಪಿ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹೇಳುವ ರೀತಿ ಅಯೋಧ್ಯೆಯ ಟ್ರಸ್ಟ್’ನಲ್ಲಿ ಬಿಜೆಪಿಯವರು ಯಾರೂ ಇಲ್ಲ. ಆದರೂ ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಅಯೋಧ್ಯೆ ರಾಮಮಂದಿರ ಹುಂಡಿ ಕಳವು ಆಗಿರುವುದರಿಂದ ನಮಗೂ ನೋವಾಗಿದೆ. ಅಯೋಧ್ಯೆ ಐದು ಶತಮಾನಗಳ ಹೋರಾಟ. ಲಕ್ಷಾಂತರ ಜನ ರಾಮಮಂದಿರ ಪುನರ್ ನಿರ್ಮಾಣಕ್ಕಾಗಿ ಜೀವ ತೆತ್ತಿದ್ದಾರೆ. ಕೋಟ್ಯಂತರ ಜನರ ಭಾವನೆ ಬೆರೆಸಿ ಮಂದಿರ ನಿರ್ಮಾಣ ಆಗಿದೆ ಎಂದರು.

ರಾಮಮಂದಿರದ ನಿರ್ಮಾಣ ವಿರೋಧಿಗಳನ್ನು ಸೋಲಿಸಿ ಪರವಾಗಿದ್ದವರಿಗೆ ಮತ ಹಾಕಿ ಜನ ಅವರನ್ನು ಅಧಿಕಾರಕ್ಕೆ ತಂದಿದ್ದಾರೆ. ಕೆಲವರು ಹಣ ದುರುಪಯೋಗ ಮಾಡಿದ್ದಾರೆ. ಆರೋಪ ಬಂದ ತಕ್ಷಣ ಸರ್ಕಾರ ಎಸ್‍ಐಟಿ ರಚಿಸಲಾಗಿದೆ. ಎಂಟಕ್ಕೂ ಹೆಚ್ಚು ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಯಾವತ್ತೂ ಬಹಿರಂಗ ಸಮರ್ಥನೆ ಕೊಟ್ಟಿಲ್ಲ. ನಾಲ್ಕು ದಶಕಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಇಷ್ಟು ದಿನವೂ ಕಾಂಗ್ರೆಸ್ ಮಂದಿರ ಆಗಬೇಕು ಎಂದು ಹೇಳಿಲ್ಲ. ಅವರು ಸಮರ್ಥನೆ ಮಾಡಿದ್ದರೆ ಇಷ್ಟೊಂದು ಸಂಘರ್ಷ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಅವರೂ ಎರಡು ದಶಕಗಳಿಂದ ರಾಜಕೀಯದಲ್ಲಿದ್ದಾರೆ. ಅವರು ಒಂದು ದಿನವೂ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಹೇಳಿಲ್ಲ. ಕಳಕಳಿ ವ್ಯಕ್ತಪಡಿಸಿಲ್ಲ. ಅವರ ತಂದೆಯೂ ಬೆಂಬಲಿಸಿಲ್ಲ. ನಾವು ಕರಸೇವೆಗೆ ಹೋದಾಗ ಜೈಲಿಗೆ ಕಳಿಸಿದರು. ಜೈ ಶ್ರೀರಾಮ್ ಎಂದು ಕೂಗಿದ್ದೇ ಅಪರಾಧ ಎಂದು ಹೇಳಿದರು ಎಂದರು.
ರಾಮಮಂದಿರ ಹುಂಡಿ ಹಣದ ಬಗ್ಗೆ ಮಾತನಾಡುವವರು, ಗೃಹಲಕ್ಷ್ಮಿ ಹಣ ಲೂಟಿ ಹೊಡೆದವರ ಬಗ್ಗೆಯೂ ತನಿಖೆ ಮಾಡಬೇಕು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡುವವರು ಗೃಹಲಕ್ಷ್ಮಿ ಅಕ್ರಮದ ಬಗ್ಗೆಯೂ ತನಿಖೆ ಮಾಡಲು ಸಲಹೆ ನೀಡಲಿ ಎಂದರು.
ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವಿಟರ್‍ನಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ. ಅವರು ಲವ್ ಜಿಹಾದ್ ಬಗ್ಗೆ ಮಾತೇ ಆಡಲ್ಲ. ನರೇಗಲ್‍ನ ಸಣ್ಣ ಕಾರಣಕ್ಕೆ ಗಲಭೆ ಆಗಿದೆ. ಅದರ ಆರೋಪಿಗಳನ್ನು ಬಂಧಿಸಿಲ್ಲ. ಹಿಂದೂ ಕಾರ್ಯಕರ್ತರಾದರೆ ಬಹಳ ಪೌರುಷ ತೋರಿಸುತ್ತೀರಿ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯ ಹೇಳಿಕೆ ನೀಡಲು ಗೃಹ ಮಂತ್ರಿ ಮಾಡಿಲ್ಲ. ರಾಜ್ಯದಲ್ಲಿ ಡ್ರಗ್ಸ್ ಬಳಕೆ, ಅತ್ಯಾಚಾರ, ಬೆಟ್ಟಿಂಗ್, ಕೊಲೆ ಆದರೂ ಭಯ ಇಲ್ಲದೇ ಆರೋಪಿಗಳು ಇದ್ದಾರೆ. ಇವೂ ನಿಮ್ಮ ವ್ಯಾಪ್ತಿಗೆ ಬರುತ್ತವೆ. ಇದರ ಬಗ್ಗೆಯೂ ಗೃಹ ಸಚಿವರು ಉತ್ತರ ಕೊಡಲಿ ಎಂದು ಸಿ.ಟಿ.ರವಿ ಆಗ್ರಹಿಸಿದರು.