ನವೆಂಬರ್ 9ರಿಂದ 137 ಕ್ಯಾನ್ಸರ್ ಔಷಧಗಳ ಬೆಲೆ ಶೇ. 70ರವರೆಗೆ ಇಳಿಕೆ
ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಲು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) 137 ನಿಗದಿತವಲ್ಲದ ಕ್ಯಾನ್ಸರ್ ವಿರೋಧಿ ಔಷಧಗಳ ಮೇಲಿನ ವ್ಯಾಪಾರ ಅಂಚುಗಳನ್ನು ನಿಯಂತ್ರಿಸಿದೆ. ಇದರಿಂದ ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೇ. 70ರವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಪರಿಷ್ಕೃತ ಬೆಲೆಗಳು 2026ರ ನವೆಂಬರ್ 9ರಿಂದ ಜಾರಿಗೆ ಬರಲಿವೆ.
ಅಕ್ಟೋಬರ್ 17ರಂದು ಅಧಿಸೂಚನೆ ಹೊರಡಿಸಿರುವ ಪ್ರಾಧಿಕಾರ, ಔಷಧಗಳ ಮೇಲಿನ ಅತಿಯಾದ ವ್ಯಾಪಾರ ಅಂಚುಗಳನ್ನು ತಡೆಯುವುದು ಮತ್ತು ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವುದು ಈ ಕ್ರಮದ ಉದ್ದೇಶ ಎಂದು ತಿಳಿಸಿದೆ.
ಪರಿಷ್ಕೃತ ಪಟ್ಟಿಯಲ್ಲಿ 20ಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್ಗಳ ಚಿಕಿತ್ಸೆಗೆ ಬಳಸುವ ಇಮ್ಯುನೊಥೆರಪಿ ಔಷಧಗಳು, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಡೆನೊಸುಮಾಬ್, ನ್ಯೂಟ್ರೋಪೆನಿಯಾ ತಡೆಗೆ ಬಳಸುವ ಪೆಗ್ಫಿಲ್ಗ್ರಾಸ್ಟಿಮ್ ಹಾಗೂ ಕೊಲೊನ್, ಅಂಡಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಬೆವಾಸಿಜುಮಾಬ್ ಸೇರಿವೆ. ಪೆಂಬ್ರೊಲಿಜುಮಾಬ್, ದುರ್ವಾಲುಮಾಬ್ ಮತ್ತು ಒಸಿಮೆರ್ಟಿನಿಬ್ನಂತಹ ಔಷಧಗಳ ಬೆಲೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.

ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013ರ ಪ್ಯಾರಾಗ್ರಾಫ್ 19ರ ಅಡಿಯಲ್ಲಿ NPPA, ಆಯ್ದ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯ ಶೇ. 30ರಷ್ಟು ವ್ಯಾಪಾರ ಅಂಚನ್ನು ಮಿತಿಗೊಳಿಸಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯದ ತಜ್ಞರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಔಷಧಗಳನ್ನು ಗುರುತಿಸಲಾಗಿದ್ದು, ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.
2019ರಲ್ಲಿ ಇದೇ ರೀತಿಯ ಕ್ರಮದಡಿ 42 ಕ್ಯಾನ್ಸರ್ ವಿರೋಧಿ ಔಷಧಗಳನ್ನು ಒಳಪಡಿಸಲಾಗಿತ್ತು. ಬಳಿಕ 526 ಬ್ರ್ಯಾಂಡ್ಗಳ ಬೆಲೆಗಳು ಶೇ. 90ರವರೆಗೆ ಕಡಿಮೆಯಾಗಿದ್ದವು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೆಜೆಟ್ ಅಧಿಸೂಚನೆಯ ಏಳು ದಿನಗಳೊಳಗೆ ತಯಾರಕರು ಪರಿಷ್ಕೃತ ಬೆಲೆಗಳ ವಿವರಗಳನ್ನು NPPAಗೆ ಸಲ್ಲಿಸಿ, ನವೀಕರಿಸಿದ ಬೆಲೆಪಟ್ಟಿಗಳನ್ನು ಪ್ರಕಟಿಸಬೇಕು. ನವೆಂಬರ್ 9ರಿಂದ ಔಷಧ ಮಾರಾಟಗಾರರು ಮತ್ತು ಆಸ್ಪತ್ರೆಗಳು ಪರಿಷ್ಕೃತ ದರಗಳನ್ನೇ ವಿಧಿಸಬೇಕು. ನಿಯಮಗಳ ಪಾಲನೆಯನ್ನು ರಾಜ್ಯ ಔಷಧ ನಿಯಂತ್ರಕರು ಮೇಲ್ವಿಚಾರಣೆ ಮಾಡಲಿದ್ದಾರೆ.
ಔಷಧಗಳ ಕೊರತೆ ಉಂಟಾಗದಂತೆ ಉತ್ಪಾದನೆ ಮತ್ತು ಪೂರೈಕೆಯ ಮಟ್ಟವನ್ನು ಕಾಯ್ದುಕೊಳ್ಳುವಂತೆಯೂ ಕಂಪನಿಗಳಿಗೆ ಸೂಚಿಸಲಾಗಿದೆ. ಗ್ರಾಹಕರು ‘ಫಾರ್ಮಾ ಸಹಿ ದಾಮ್’ ಆ್ಯಪ್ ಅಥವಾ nppa.gov.in ವೆಬ್ಸೈಟ್ ಮೂಲಕ ಪರಿಷ್ಕೃತ ಬೆಲೆಗಳನ್ನು ಪರಿಶೀಲಿಸಬಹುದು.