ಪ್ರಭುದೇವರಿಂದ ಯುವ ದಸರಾ ಉದ್ಘಾಟನೆ; ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದೇ ಉದ್ದೇಶ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಮೈಸೂರಿನ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪ ಜಿಲ್ಲಾಡಳಿತ ಹಾಗೂ ಯುವ ದಸರಾ ಉಪಸಮಿತಿ ವತಿಯಿಂದ ಆಯೋಜಿಸಿರುವ ‘ಯುವ ದಸರಾ’ ಸಾಂಸ್ಕೃತಿಕ ಸಂಭ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.
ಮೈಸೂರಿನ ಹೆಮ್ಮೆಯ ನೃತ್ಯ ಕಲಾವಿದ ಹಾಗೂ ಖ್ಯಾತ ನಟ ಪ್ರಭುದೇವ ಅವರು ಯುವ ದಸರಾವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಯುವಜನರು ದೈನಂದಿನ ಒತ್ತಡಗಳ ನಡುವೆಯೂ ತಮ್ಮ ಸೃಜನಶೀಲತೆ, ಪ್ರತಿಭೆ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಬೇಕು. ಸಕಾರಾತ್ಮಕ ಚಿಂತನೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುವ ಜತೆಗೆ, ಕಲೆ, ಸಂಸ್ಕೃತಿ ಮತ್ತು ಮನರಂಜನೆಯ ಮೂಲಕ ಜೀವನವನ್ನು ಸಂಭ್ರಮಿಸುವ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಯುವಜನರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ಅವರಲ್ಲಿ ಉತ್ಸಾಹ ಮತ್ತು ಸಂತಸ ಮೂಡಿಸುವುದು ಯುವ ದಸರಾ ಆಚರಣೆಯ ಮುಖ್ಯ ಆಶಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್ ಗೌಡ, ಅನಿಲ್ ಚಿಕ್ಕಮಾದು, ತನ್ವೀರ್ ಸೇಠ್, ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ರಘು ಕೌಟಿಲ್ಯ ಮತ್ತು ಮಂಜೇಗೌಡ ಸೇರಿದಂತೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.