ಡಿಜಿಟಲ್ ಅಪಾಯಗಳಿಂದ ಸಮುದಾಯದ ರಕ್ಷಣೆ: ಯುವಜನರಿಗೆ ಸೈಬರ್ ಸುರಕ್ಷತೆ
ಇಂದಿನ ಡಿಜಿಟಲ್ ಯುಗದಲ್ಲಿ ಯುವಜನರು ಆನ್‌ಲೈನ್ ಜಗತ್ತಿನಲ್ಲಿ ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ವರ್ತಿಸುವುದು ಅಗತ್ಯವಾಗಿದೆ. ಶಿಕ್ಷಣ, ಸಂವಹನ, ದಾನ ಹಾಗೂ ಸಮಾಜಸೇವೆಗೆ ಇಂಟರ್‌ನೆಟ್ ಹಲವು ಅವಕಾಶಗಳನ್ನು ಒದಗಿಸುತ್ತಿದ್ದರೂ, ಇದರೊಂದಿಗೆ ಸೈಬರ್ ವಂಚನೆ ಮತ್ತು ಇತರ ಅಪಾಯಗಳೂ ಹೆಚ್ಚುತ್ತಿವೆ.
ಫಿಶಿಂಗ್ ಲಿಂಕ್‌ಗಳು, ನಕಲಿ ದೇಣಿಗೆ ಮನವಿಗಳು, ಧಾರ್ಮಿಕ ವಿದ್ವಾಂಸರು ಹಾಗೂ ಸಂಸ್ಥೆಗಳ ಹೆಸರಿನಲ್ಲಿ ನಡೆಯುವ ವಂಚನೆ, ಯುವಜನರನ್ನು ದುರುದ್ದೇಶಗಳಿಗೆ ಸೆಳೆಯುವ ಆನ್‌ಲೈನ್ ಚಟುವಟಿಕೆಗಳು, ತೀವ್ರವಾದಿ ವಿಷಯಗಳು ಮತ್ತು ವೈಯಕ್ತಿಕ ಮಾಹಿತಿಯ ದುರ್ಬಳಕೆ ಪ್ರಮುಖ ಅಪಾಯಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ನಂಬಿಕೆ ಹಾಗೂ ಗುರುತನ್ನೂ ವಂಚನೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಇಸ್ಲಾಂನಲ್ಲಿ ‘ಅಮಾನತ್’ ಎಂಬುದು ಜವಾಬ್ದಾರಿಯಿಂದ ಕಾಪಾಡಬೇಕಾದ ಹೊಣೆಗಾರಿಕೆಯನ್ನು ಸೂಚಿಸುತ್ತದೆ. ಡಿಜಿಟಲ್ ಯುಗದಲ್ಲಿ ಪಾಸ್‌ವರ್ಡ್‌ಗಳು, ವೈಯಕ್ತಿಕ ಮಾಹಿತಿ, ಹಣಕಾಸಿನ ವಿವರಗಳು, ಛಾಯಾಚಿತ್ರಗಳು ಸೇರಿದಂತೆ ಇತರರ ಖಾಸಗಿ ಮಾಹಿತಿಯ ರಕ್ಷಣೆಯೂ ಇದೇ ಜವಾಬ್ದಾರಿಯ ಭಾಗವಾಗಿದೆ.
ಬಲವಾದ ಹಾಗೂ ಪ್ರತ್ಯೇಕ ಪಾಸ್‌ವರ್ಡ್‌ಗಳನ್ನು ಬಳಸುವುದು, ಟು-ಫ್ಯಾಕ್ಟರ್ ಅಥೆಂಟಿಕೇಷನ್ (2FA) ಸಕ್ರಿಯಗೊಳಿಸುವುದು, ಮೊಬೈಲ್ ಹಾಗೂ ಇತರ ಸಾಧನಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುವುದು ಸುರಕ್ಷತೆಗೆ ಸಹಕಾರಿ. ದೇಣಿಗೆ ಮನವಿಗಳು ಅಥವಾ ಸಂದೇಶಗಳ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು, ಪೋಸ್ಟ್ ಮಾಡುವ ಅಥವಾ ಸಂದೇಶವನ್ನು ಫಾರ್ವರ್ಡ್ ಮಾಡುವ ಮುನ್ನ ಅದರ ಪರಿಣಾಮದ ಬಗ್ಗೆ ಯೋಚಿಸುವುದು ಅಗತ್ಯ.
ಪೋಷಕರು, ಮಸೀದಿಗಳು ಹಾಗೂ ಸಮುದಾಯ ಸಂಘಟನೆಗಳೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಯುವಜನರಿಗೆ ಆನ್‌ಲೈನ್ ವಂಚನೆ, ಪ್ರಚೋದನಕಾರಿ ವಿಷಯ, ತಪ್ಪುಮಾಹಿತಿ ಹಾಗೂ ಹಾನಿಕಾರಕ ಡಿಜಿಟಲ್ ವಿಷಯಗಳನ್ನು ಗುರುತಿಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು.
ಡಿಜಿಟಲ್ ಜಾಗರೂಕತೆ ಎಂದರೆ ಭಯಪಡುವುದಲ್ಲ; ಜವಾಬ್ದಾರಿಯಿಂದ ವರ್ತಿಸುವುದು. ನಿಮ್ಮ ಮಾಹಿತಿಯನ್ನು ರಕ್ಷಿಸಿ, ನಂಬುವ ಮೊದಲು ಪರಿಶೀಲಿಸಿ, ಹಂಚುವ ಮೊದಲು ಯೋಚಿಸಬೇಕಿದೆ.
ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಆನ್‌ಲೈನ್ ಸುರಕ್ಷತೆ ಕುಟುಂಬ ಮತ್ತು ಸಮುದಾಯದ ಸುರಕ್ಷತೆಯೊಂದಿಗೂ ನೇರವಾಗಿ ಸಂಬಂಧಿಸಿದೆ.
- ಬರಹ: ಅಫೀಫ್ ಅಹ್ಸನ್