ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಬಂಧಿಸಿ ಸತ್ಯ ಬಹಿರಂಗಪಡಿಸಿ: ಡಾ. ರವಿ ಸಿ.ಟಿ ಆಗ್ರಹ
ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣದ ಹಿಂದೆ ಯಾರಿದ್ದಾರೆ, ಅದನ್ನು ಯಾರು ಮಾಡಿಸಿದ್ದಾರೆ ಮತ್ತು ಯಾವ ಉದ್ದೇಶಕ್ಕಾಗಿ ನಡೆಸಲಾಗಿದೆ ಎಂಬ ಸಂಪೂರ್ಣ ಸತ್ಯವನ್ನು ರಾಜ್ಯದ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದರು. ಸ್ಟಿಂಗ್ ಆಪರೇಷನ್ ನಡೆದಿದ್ದರೆ ಮೊದಲು ಅದರ ಮೂಲವನ್ನು ಪತ್ತೆಹಚ್ಚಬೇಕು. ಅದು ಎಲ್ಲಿಂದ ಆರಂಭವಾಯಿತು, ಯಾರು ಮಾಡಿಸಿದರು ಮತ್ತು ಯಾರು ನಡೆಸಿದರು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೊಬೈಲ್ ಮತ್ತು ಸಿಮ್ಗಳನ್ನು ಪಡೆದು ಅಪ್ಲೋಡ್ ಮಾಡಿದವರ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ನಿಜವಾಗಿ ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು ಎಂಬುದನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಅವರ ಹೆಸರು ಬಹಿರಂಗವಾದರೆ ಅಧಿಕಾರದ ಸ್ಥಾನಪಲ್ಲಟವಾಗುತ್ತದೆ ಎಂಬ ಭಯವಿದೆಯೇ? ಸಿದ್ದರಾಮಯ್ಯ ಅವರನ್ನು ಯಾವ ಉದ್ದೇಶಕ್ಕಾಗಿ ಗುರಿಯಾಗಿಸಲಾಗಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಪಾಂಡೆ ಎಂಬುವವರು ಮೊಬೈಲ್ ತೆಗೆದುಕೊಂಡು ಹೋಗಿ ವಿನಿಮಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಸ್ಟಿಂಗ್ ನಡೆಸಿದವರು ಯಾರು ಎಂಬ ಮೂಲ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ಟಿಂಗ್ ಮಾಡಿದವರನ್ನು ಏಕೆ ಬಂಧಿಸಿಲ್ಲ? ಅವರಿಗೆ ರಕ್ಷಣೆ ನೀಡುತ್ತಿರುವವರು ಯಾರು? ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಮೂಲಕ ಪ್ರಕರಣದ ಸತ್ಯಾಂಶವನ್ನು ಹೊರತರುವುದು ಅಗತ್ಯ ಎಂದು ಆಗ್ರಹಿಸಿದರು.

ಈ ಷಡ್ಯಂತ್ರದ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಒಂದೇ ಕಾರಣ ಇರುವುದಿಲ್ಲ, ಹಲವು ಕಾರಣಗಳಿರಬಹುದು ಎಂದರು. ಈ ತನಿಖೆಯ ಜವಾಬ್ದಾರಿಯನ್ನು ತನಗೆ ವಹಿಸಿದ್ದರೆ ಸತ್ಯವನ್ನು ಬಹಿರಂಗಪಡಿಸುತ್ತಿದ್ದೆ. ಆದರೆ, ತನಿಖೆಯ ಹೊಣೆಗಾರಿಕೆಯನ್ನು ತನಗೂ ನೀಡಿಲ್ಲ, ಪ್ರಶ್ನೆ ಕೇಳುತ್ತಿರುವವರಿಗೂ ನೀಡಿಲ್ಲ. ತನಿಖೆ ನಡೆಸುತ್ತಿರುವವರೇ ಈ ಬಗ್ಗೆ ಉತ್ತರಿಸಬೇಕು ಎಂದು ಹೇಳಿದರು.
ಯುವಕರನ್ನು ಉದ್ಯೋಗದಾತರನ್ನಾಗಿ ರೂಪಿಸುವುದು ಮೋದಿ ಸರ್ಕಾರದ ಉದ್ದೇಶ
ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಮಾತನಾಡಿದ ಡಾ. ರವಿ ಸಿ.ಟಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಯುವಕರು ಕೌಶಲ್ಯವಂತರಾದರೆ ಉದ್ಯೋಗಕ್ಕಾಗಿ ಅಲೆಯುವ ಬದಲು ತಾವೇ ಉದ್ಯೋಗ ಸೃಷ್ಟಿಸುವವರಾಗಬಹುದು ಎಂದರು.
ಬ್ರಿಟಿಷರ ಆಡಳಿತದಲ್ಲಿ ಪದವಿ ಪಡೆದು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಮೋದಿ ಸರ್ಕಾರದ ಉದ್ದೇಶ ಉದ್ಯೋಗ ಕೇಳುವವರನ್ನು ಸೃಷ್ಟಿಸುವುದಲ್ಲ, ಉದ್ಯೋಗ ನೀಡುವವರನ್ನು ರೂಪಿಸುವುದಾಗಿದೆ. ಇದು ಬ್ರಿಟಿಷ್ ಭಾರತದ ಕಲ್ಪನೆಗೂ ಮೋದಿ ಭಾರತದ ಕಲ್ಪನೆಗೂ ಇರುವ ವ್ಯತ್ಯಾಸ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಸ್ಟಾರ್ಟ್ಅಪ್, ಸ್ಟ್ಯಾಂಡ್ಅಪ್, ಮುದ್ರಾ ಯೋಜನೆ ಮತ್ತು ಸ್ಕಿಲ್ ಇಂಡಿಯಾದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಯುವಕರು ಸ್ವಾವಲಂಬಿಗಳಾಗಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬುದು ಈ ಯೋಜನೆಗಳ ಆಶಯವಾಗಿದೆ ಎಂದರು.
ಒಂದು ಕಾಲದಲ್ಲಿ ಭಾರತ ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಭಾರತೀಯರ ಕೌಶಲ್ಯ, ಮಸ್ಲಿನ್ ಬಟ್ಟೆಗಳು ಮತ್ತು ಕರಕುಶಲ ವಸ್ತುಗಳಿಗೆ ವಿಶ್ವದಾದ್ಯಂತ ಬೇಡಿಕೆ ಇತ್ತು. ಆ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮರುಸ್ಥಾಪಿಸುವ ಅಗತ್ಯವಿದೆ. ಸಾಂಪ್ರದಾಯಿಕ ಕೌಶಲ್ಯಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರೆ ಭಾರತ ಮತ್ತೊಮ್ಮೆ ಭವ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.